ಹೊಸ ದಿಗಂತ ವರದಿ ಪೊನ್ನಂಪೇಟೆ:
ಮಡಿಕೇರಿಯಲ್ಲಿರುವ ಆಕಾಶವಾಣಿ (ಎಫ್ಎಂ)ಕೇಂದ್ರವನ್ನು ಬೆಂಗಳೂರು ಆಕಾಶವಾಣಿ ಕೇಂದ್ರದೊಂದಿಗೆ ವಿಲೀನ ಮಾಡುವ ಪ್ರಸ್ತಾವನೆಯನ್ನು ಕೈಬಿಟ್ಟು ಯಥಾಸ್ಥಿತಿಯಲ್ಲಿ ಮುಂದುವರೆಸಬೇಕು ಎಂದು ಕೊಡಗು ಸಂರಕ್ಷಣಾ ವೇದಿಕೆಯ ಪ್ರಮುಖರು ಮನವಿ ಮಾಡಿದ್ದಾರೆ.
ಮಡಿಕೇರಿ ಕೇಂದ್ರದ ಕಾರ್ಯನಿರ್ವಹಣೆಯನ್ನು ಬೆಂಗಳೂರಿಗೆ ವರ್ಗಾಯಿಸುವುದರಿಂದ ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಮಾಹಿತಿಗಾಗಿ ಆಕಾಶವಾಣಿಯನ್ನು ಅವಲಂಬಿಸಿರುವ ಜನರಿಗೆ ದೊಡ್ಡ ನಷ್ಟವಾಗಲಿದೆ. ಆದ್ದರಿಂದ ಇಂತಹ ಯಾವುದೇ ವಿಲೀನ ಪ್ರಕ್ರಯೆಯನ್ನು ಸ್ಥಗಿತ ಮಾಡಿ ಈಗ ಇರುವಂತೆಯೇ ಮಡಿಕೇರಿ ಆಕಾಶವಾಣಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಸಂಸದ ಪ್ರತಾಪ್ ಸಿಂಹ ಅವರನ್ನು ಆಗ್ರಹಿಸಲಾಗಿದೆ.
ಪೊನ್ನಂಪೇಟೆಯಲ್ಲಿ ಈ ಬಗ್ಗೆ ಸಭೆ ನಡೆಸಿದ ಪ್ರಮುಖರು, ಕೊಡಗು ಮೈಸೂರು ಕ್ಷೇತ್ರ ಸಂಸದ ಪ್ರತಾಪ್ ಸಿಂಹ ಅವರಿಗೆ ಪತ್ರ ಬರೆದು ತಕ್ಷಣವೇ ಈ ನಿಟ್ಟಿನಲ್ಲಿ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವರಾದ ಪ್ರಕಾಶ್ ಜಾವ್ಡೆಕರ್ ಅವರೊಂದಿಗೆ ಸಮಾಲೋಚಿಸಿ ಮಡಿಕೇರಿ ಆಕಾಶವಾಣಿ ಯಥಾಸ್ಥಿತಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದ್ದಾರೆ.
ಮುಖ್ಯವಾಗಿ ಮಡಿಕೇರಿ ಆಕಾಶವಾಣಿಯು ಪ್ರಾದೇಶಿಕ ಭಾಷೆಗಳಾದ ಕೊಡವ, ಅರೆಭಾಷೆ, ಬ್ಯಾರಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿರುವುದರಿಂದ ಇಲ್ಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಕಾಶವಾಣಿಯನ್ನು ಕೇಳುತ್ತಿದ್ದಾರೆ. ನಿಧನ ಸುದ್ದಿ ಪ್ರಸಾರಕ್ಕೆ ಪ್ರಸಾರಭಾರತಿಯ ಅನುಮತಿಯನ್ನು ಮಡಿಕೇರಿ ಆಕಾಶವಾಣಿ ಪಡೆದುಕೊಂಡಿದೆ. ಬೆಂಗಳೂರು ಆಕಾಶವಾಣಿಯೊಂದಿಗೆ ವಿಲೀನವಾದರೆ ಸ್ಥಳೀಯವಾಗಿ ಪ್ರಸಾರವಾಗುವ ಸುದ್ದಿ ಸಮಾಚಾರ ಮತ್ತು ನಿಧನ ಸುದ್ದಿ ಸ್ಥಗಿತವಾಗುತ್ತದೆ. ಇದರಿಂದ ಕೇಳುಗರೇ ಇಲ್ಲದಂತಾಗಿ ಅಕಾಶವಾಣಿಗೆ ಜಾಹೀರಾತು ಸಹ ಬರದೆ ನಷ್ಟವಾಗಲಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಸ್ಥಳೀಯ ಸಂಸ್ಕೃತಿ, ಕೃಷಿ, ಪ್ರತಿಭೆ, ಸ್ಥಳೀಯರಿಗೆ ಮಾಹಿತಿ ನೀಡುವ ಪರಿಕಲ್ಪನೆಯಲ್ಲಿ 1993ರಲ್ಲಿ ಸ್ಥಾಪನೆಯಾದ ಮಡಿಕೇರಿ ಆಕಾಶವಾಣಿಯನ್ನು ಯಥಾಸ್ಥಿತಿ ಮುಂದುವರೆಸಬೇಕು. ಅದರಲ್ಲೂ ವಿಶೇಷವಾಗಿ ಬೆಳಗ್ಗೆ 6 ಗಂಟೆಯಿಂದ 8 ಗಂಟೆಯವರೆಗೆ ಪ್ರಾದೇಶಿಕ ಕಾರ್ಯಕ್ರಮ ಮತ್ತು ಮಡಿಕೇರಿಯಿಂದ ನೇರ ಪ್ರಸಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.
ಕೊಡಗು ಗುಡ್ಡಗಾಡು ಪ್ರದೇಶವಾಗಿದ್ದು ಇಲ್ಲಿನ ಬಹಳಷ್ಟು ಪ್ರದೇಶಕ್ಕೆ ಸಕಾಲದಲ್ಲಿ ಪತ್ರಿಕೆಗಳು ತಲುಪುವುದಿಲ್ಲ. ಯಾವುದೇ ಮಾಹಿತಿ ತುರ್ತಾಗಿ ಬಿತ್ತರವಾಗಲು ಸಾಧನಗಳಿಲ್ಲ. ಗ್ರಾಮೀಣ ಭಾಗದಲ್ಲಿ ದೂರವಾಣಿ, ವಿದ್ಯುತ್ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಆದ್ದರಿಂದ ಸ್ಥಳೀಯ ಸಂಸ್ಕೃತಿ, ಪ್ರತಿಭೆ, ಕೃಷಿಗೆ ಮಾರ್ಗದರ್ಶನ ಮಾಹಿತಿ, ಸಮುದಾಯ ಅಭಿವೃದ್ಧಿ, ವಿಮರ್ಶಾತ್ಮಕ ಮಾಹಿತಿ, ಪ್ರದೇಶದ ಸಾಮರ್ಥ್ಯ ಅಭಿವೃದ್ಧಿ ಅವಕಾಶಗಳ ಮಾಹಿತಿಗಳನ್ನು ಸಮರ್ಥವಾಗಿ ನೀಡುತ್ತಾ ಬಂದಿದೆ. ಆಧುನಿಕ ಯುಗದಲ್ಲಿಯೂ ಕೊಡಗಿನಲ್ಲಿ ಆಕಾಶವಾಣಿ ಜನಪ್ರಿಯವಾಗಿದೆ.