Friday, August 12, 2022

Latest Posts

ಮಡಿಕೇರಿ| ಮಲೆನಾಡು ಭಾಗದ ಚತುಷ್ಚಕ್ರ ವಾಹನ ಮಾಲಕರಿಗೂ ಬಿಪಿಎಲ್ ಪಡಿತರ ಚೀಟಿ : ಸಚಿವ ಗೋಪಾಲಯ್ಯ ಭರವಸೆ

ಮಡಿಕೇರಿ : ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಮನೆಗಳು ಇರುವುದರ ಜೊತೆಗೆ ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಸಾಧಾರಣ ಕುಟುಂಬಗಳು ಸಹ ನಾಲ್ಕು ಚಕ್ರದ ವಾಹನ ಉಪಯೋಗಿಸುತ್ತಿದ್ದು, ಅಂತಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಪಡಿತರ ವಿತರಣೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.
ಮಲೆನಾಡು ಭಾಗದಲ್ಲಿ ಬಡವರಾಗಿದ್ದರೂ ಚತುಷ್ಚಕ್ರ ವಾಹನ ಹೊಂದಿರುವುದು ಅನಿವಾರ್ಯವಾಗಿದ್ದು, ಅದೇ ಕಾರಣಕ್ಕೆ ಅವರಿಗೆ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರನ್ನಾಗಿಸುವುದು ಸರಿಯಲ್ಲ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಸಭೆಯಲ್ಲಿ ಸಚಿವರ ಗಮನಸೆಳೆದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಸಚಿವರು, ತಮ್ಮ ಸಲಹೆಯನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಕೋವಿಡ್-19ಹಿನ್ನೆಲೆ ಲಾಕ್‌ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರತೀ ಕುಟುಂಬಕ್ಕೂ ಪಡಿತರ ವಿತರಿಸಲು ಸರ್ಕಾರ ಕ್ರಮವಹಿಸಿದೆ. ಅದರಂತೆ ಶೇ.94 ರಷ್ಟು ಪಡಿತರ ತಲುಪಿಸಲಾಗಿದೆ ಎಂದು ಸಚಿವರು ನುಡಿದರು.
ಲಾಕ್‌ಡೌನ್ ಸಂದರ್ಭದಲ್ಲಿ ಯಾವ ಕುಟುಂಬವೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಎಲ್ಲಾ ಕುಟುಂಬಗಳಿಗೂ ಪಡಿತರ ವಿತರಿಸಿದೆ. ಹಾಗೆಯೇ ಜೂನ್ ತಿಂಗಳಲ್ಲಿಯೂ ಸಹ ಪಡಿತರ ವಿತರಿಸಲಾಗುವುದು ಎಂದರು.
ಸಂಚಾರಿ ಅಂಗಡಿ : ರಾಜ್ಯದ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕೆಲವು ಮಲೆನಾಡು ಭಾಗದಲ್ಲಿ ಅಂತರ್ಜಾಲ ಸಂಪರ್ಕ ತಲುಪದಿರುವ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಕಡ್ಡಾಯವಾಗಿ ಪಡಿತರ ತಲುಪಿಸುವಂತೆ ಅಧಿಕಾರಿಗಳಿಗೆ ಆಹಾರ ಸಚಿವರು ಸೂಚಿಸಿದರು.
ಪಡಿತರ ಚೀಟಿ ಇಲ್ಲದ ವಲಸೆ ಕುಟುಂಬಗಳಿಗೂ ಕಡ್ಡಾಯವಾಗಿ ಪಡಿತರ ತಲುಪಿಸಬೇಕು. ಮುಂದಿನ ಜೂನ್ ತಿಂಗಳಲ್ಲಿ ಅಕ್ಕಿ ಜೊತೆಗೆ ಕಡಲೆಕಾಳು ವಿತರಿಸಲಾಗುವುದು. ಈ ಪ್ರಕ್ರಿಯೆಯು ಜೂನ್ 11 ರಿಂದ ಆರಂಭವಾಗಲಿದೆ. ಕಡುಬಡವರು ಮತ್ತು ಕಟ್ಟಕಡೆಯ ಜನರಿಗೆ ಪಡಿತರ ತಲುಪಿಸಬೇಕು. ಯಾರೂ ಸಹ ಹಸಿವಿನಿಂದ ಬಳಲಬಾರದು ಎಂದು ಸಚಿವರು ಹೇಳಿದರು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಮತ್ತು ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಹಲವು ಕುಟುಂಬಗಳಿಗೆ ಅಡುಗೆ ಅನಿಲ ವಿತರಿಸಲಾಗುತ್ತಿದೆ. ಸರ್ಕಾರದ ಯೋಜನೆಗಳನ್ನು ಕಡ್ಡಾಯವಾಗಿ ತಲುಪಿಸಬೇಕು ಎಂದು ಸಚಿವರು ಸೂಚಿಸಿದರು.
ಕಳಪೆಯಾದಲ್ಲಿ ಸರಿಪಡಿಸಿ : ಪಡಿತರ ಕಳಪೆ ಕಂಡುಬಂದಲ್ಲಿ ಮಾಹಿತಿ ನೀಡಬೇಕು. ಜೊತೆಗೆ 24 ಗಂಟೆಯೊಳಗೆ ಸರಿಪಡಿಸುವ ಕಾರ್ಯವಾಗಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ ಮಾಡಬಾರದು. ಈ ಬಗ್ಗೆ ಆಗಾಗ ಪರಿಶೀಲನೆ ನಡೆಸಬೇಕು ಎಂದು ಸಚಿವರು ಹೇಳಿದರು. ನ್ಯಾಯಬೆಲೆ ಅಂಗಡಿಗಳಲ್ಲಿ ಲೋಪ ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಸಚಿವರು ಇದೇ ಸಂದರ್ಭ ಎಚ್ಚರಿಕೆ ನೀಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಅಂತರ್ಜಾಲ ಸಂಪರ್ಕ ಇಲ್ಲದ ಕಡೆಗಳಲ್ಲಿ ಸಂಚಾರಿ ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ಮುಂದುವರಿಸಬೇಕು. ಮಳೆಗಾಲದಲ್ಲಿ ಗೋಧಿ ಕೆಟ್ಟು ಹೋಗುವ ಸಾಧ್ಯತೆ ಇದೆ. ಆದ್ದರಿಂದ ಗುಣಮಟ್ಟದ ಗೋಧಿ ಪೂರೈಸಬೇಕು. ಅಂಗನವಾಡಿಗಳಲ್ಲಿ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸಬೇಕು ಎಂದು ಅವರು ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಲವು ಕುಟುಂಬಗಳು ನಾಲ್ಕು ಚಕ್ರದ ವಾಹನಗಳನ್ನು ಇಟ್ಟುಕೊ0ಡಿದ್ದು, ಈ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಅವರು ಸಚಿವರ ಗಮನಸೆಳೆದರು.
ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಪಡಿತರ ಚೀಟಿದಾರರಿಗೆ ಪೂರೈಕೆಯಾಗುವ ಅಕ್ಕಿಯಲ್ಲಿ ತೂಕದಲ್ಲಿ ಮೋಸವಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಸಂಬಂಧ ಎಚ್ಚರಿಕೆ ವಹಿಸಬೇಕಿದೆ ಎಂದು ಸಲಹೆ ಮಾಡಿದರು.
ಆಹಾರ ಇಲಾಖೆ ಉಪ ನಿರ್ದೇಶಕ ಗೌರವ ಕುಮಾರ್ ಶೆಟ್ಟಿ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತೀ ಕುಟುಂಬಕ್ಕೂ ಪಡಿತರ ವಿತರಿಸಲಾಗಿದೆ ಎ0ದರು.
ಜಿಲ್ಲೆಯಲ್ಲಿ ಒಟ್ಟು 277 ನ್ಯಾಯಬೆಲೆ ಅಂಗಡಿಗಳಿದ್ದು, 6 ಸಗಟು ಗೋದಾಮುಗಳಿವೆ. ಒಟ್ಟು 1,38,034 ಕುಟುಂಬಗಳು ಪಡಿತರ ಚೀಟಿ ಹೊಂದಿದ್ದು, ಬಿಪಿಎಲ್ 99,520, ಅಂತ್ಯೋದಯ ಅನ್ನ ಯೋಜನೆ(ಎಎವೈ) 10,043 ಎಪಿಎಲ್ ಕಾರ್ಡು 28,471 ಕುಟುಂಬದವರು ಪಡಿತರ ಚೀಟಿ ಹೊಂದಿದ್ದಾರೆ. ಎಪಿಎಲ್ ಪಡಿತರ ಚೀಟಿದಾರರಿಗೂ ಆಹಾರ ವಿತರಿಸಲಾಗಿದೆ. ಅಕ್ಕಿ, ಗೋಧಿ, ತೊಗರಿ ಬೇಳೆಯನ್ನು ಉಚಿತವಾಗಿ ನೀಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಮುಟ್ಲು, ಹಮ್ಮಿಯಾಲ, ಸೂರ್ಲಬ್ಬಿ, ಕಾಂಡನಕೊಲ್ಲಿ ಮತ್ತಿತರ ಕಡೆಗಳಲ್ಲಿ ಮೊಬೈಲ್ ಸಂಚಾರಿ ವಾಹನದ ಮೂಲಕ ಆಹಾರ ಪೂರೈಸಲಾಗುತ್ತಿದ್ದು, ಶೇ.93.4ರಷ್ಟು ಪಡಿತರ ವಿತರಿಸಲಾಗಿದೆ ಎಂದು ವಿವರಿಸಿದರು.
ಮೂರು ಸಾವಿರ ಅರ್ಜಿ : ಪಡಿತರ ಚೀಟಿಗಾಗಿ 3 ಸಾವಿರಕ್ಕೂ ಹೆಚ್ಚು ಅರ್ಜಿಗಳು ಹೊಸದಾಗಿ ಸಲ್ಲಿಕೆಯಾಗಿದ್ದು, ಅವುಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 124ಅನರ್ಹ ಪಡಿತರ ಕುಟುಂಬಗಳನ್ನು ಗುರುತಿಸಿದ್ದು, ಅವುಗಳನ್ನು ಅರ್ಹ ಕುಟುಂಬಗಳನ್ನಾಗಿ ಮಾಡಿ ಎಪಿಎಲ್ ಕಾರ್ಡ್ ನೀಡಲಾಗಿದೆ ಎಂದು ಗೌರವ್ ಕುಮಾರ್ ಶೆಟ್ಟಿ ಹೇಳಿದರು.
ತೂಕ ಮತ್ತು ಅಳತೆ ಇಲಾಖೆಯ ಸಹಾಯಕ ನಿಯಂತ್ರಕ ಲಿಂಗರಾಜು ಅವರು ಮಾಹಿತಿ ನೀಡಿದರು. ಜಿ.ಪಂ.ಕಾರ್ಯನಿರ್ವಹಣಾಧಿಕಾರಿ ಕೆ.ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ್, ಅಪರ ಜಿಲ್ಲಾಧಿಕಾರಿ ಡಾ.ಸ್ನೇಹಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss