ಮಡಿಕೇರಿ: ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ ರಾಜ್ಯದೆಲ್ಲೆಡೆ ತರಕಾರಿ ಬೆಳೆದ ರೈತರು ಬೇಡಿಕೆ ಇಲ್ಲದೆ ಕಂಗಾಲಾಗಿದ್ದಾರೆ. ಅದೇ ರೀತಿ ಕೊಡಗಿನಲ್ಲೂ ೩ ಎಕರೆ ಜಮೀನಿನಲ್ಲಿ ಎಲೆಕೋಸು ಬೆಳೆದ ರೈತನ ಬದುಕು ಬೀದಿಗೆ ಬಿದ್ದಿದೆ.
ಸುಮಾರು ೩ ಲಕ್ಷ ಖರ್ಚು ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಕುಶಾಲನಗರ ಸಮೀಪದ ಆನೆಕಾಡು ಗ್ರಾಮದ ಸತೀಶ್ ಹಾಗೂ ತಾಯಿ ಗಂಗಮ್ಮ ಕೊರೋನಾ ಲಾಕ್ ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಯಸ್ಸಾದ ತಾಯಿಯೊಂದಿಗೆ ಕೃಷಿ ಮಾಡಿ ಸ್ವಾವಲಂಬಿಯಾಗಿ ಬದುಕು ಕಟ್ಟುವ ಕನಸು ಕಾಣುತ್ತಿದ್ದ ಸತೀಶ್, ಇದೀಗ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಕೊರಗಿನಲಿದ್ದಾರೆ.
ಸಾಲ ಮಾಡಿ ಬೆಳೆದ ಕೃಷಿ ಇಂದು ಕೊಳೆತು ಕಾಡು ಹಂದಿ, ದನ, ಕಾಡಾನೆಗಳ ಪಾಲಾಗಿದ್ದು, ಆತ್ಮಹತ್ಯೆ ಒಂದೇ ಮಾರ್ಗ ಎಂಬ ಚಿಂತೆಯಲ್ಲಿದ್ದಾರೆ. ಇತ್ತ ಸಾಲಗಾರರ ಭಯದಿಂದ ದಿನದಿಂದ ದಿನಕ್ಕೆ ಹೆದರಿಕೊಂಡು ಜೀವನ ನಡೆಸುತ್ತಿದ್ದಾರೆ.
ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಪಾಸ್ ನೀಡುವಂತೆ ಈ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ಬಳಿ ಕೇಳಿದರೆ ಇಂದು ಆಗುವುದಿಲ್ಲ ನಾಳೆ ನೀಡುತ್ತೇವೆ ಎಂದು ಸತಾಯಿಸುತ್ತಿದ್ದಾರೆ ಎಂದು ಸತೀಶ್ ದೂರಿದ್ದಾರೆ. ಇದರಿಂದ ತಾನು ಬೆಳೆದ ಫಸಲನ್ನು ವ್ಯಾಪಾರ ಮಾಡಲಾಗದೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕೊಳೆತು ಬೆಳೆ ನಷ್ಟದಲ್ಲಿ ರೈತ ಕಂಗಾಲಾಗಿದ್ದಾನೆ.