ಮಡಿಕೇರಿ: ತನ್ನ ತಾಯಿ ಮೃತಪಟ್ಟಿದ್ದರೂ ಸಹ ಸೋಮವಾರ ಆರಂಭಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯ ಮೌಲ್ಯ ಮಾಪನಕ್ಕೆ ಹಾಜರಾಗಿ ವೃತ್ತಿ ಬದ್ಧತೆ ಮೆರೆದಿರುವ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಉದಯ ವಿದ್ಯಾ ಸಂಸ್ಥೆಯ ಶಿಕ್ಷಕಿ ಕವಿತಾ ಅವರನ್ನು ವಸತಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರಶಂಸಿಸಿದ್ದಾರೆ.
ಕೊರೋನಾ ಹಿನ್ನಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ತಡವಾಗಿ ನಡೆದಿವೆ. ಮಕ್ಕಳ ಭವಿಷ್ಯದ ಹಿತ ದೃಷ್ಟಿಯಿಂದ ಶಿಕ್ಷಕಿ ಕವಿತಾ ಅವರು ತಮ್ಮ ತಾಯಿ ನಿಧನರಾಗಿದ್ದರೂ ಸಹ ಮೌಲ್ಯಮಾಪನಕ್ಕೆ ಹಾಜರಾಗಿ ವಿದ್ಯಾರ್ಥಿಗಳ ಭವಿಷ್ಯದ ಬಗೆಗಿನ ಅವರ ಕಾಳಜಿಯನ್ನು ಮತ್ತು ಕರ್ತವ್ಯ ನಿμÉ್ಠಯನ್ನು ಮೆರೆದಿದ್ದಾರೆ. ವೃತ್ತಿಯಲ್ಲಿ ತೃಪ್ತಿ ಕಾಣುವ ಕವಿತಾ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಮತ್ತು ಇತರರಿಗೂ ಮಾದರಿಯಾಗಿದೆ ಎಂದು ಸಚಿವರು ಶ್ಲಾಘಿಸಿದ್ದಾರೆ.
ಶಿಕ್ಷಕಿ ಕವಿತಾ ಅವರ ತಾಯಿ 103 ವರ್ಷದ ಎಂ.ಪಿ.ಮುತ್ತವ್ವ ಅವರು ಸೋಮವಾರ ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದರು. ಆದರೂ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಗರದ ಸಂತ ಮೈಕಲರ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪರೀಕ್ಷಾ ಮೌಲ್ಯ ಮಾಪನಕ್ಕೆ ಆಗಮಿಸಿ ಕವಿತಾ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ವಿ.ಸೋಮಣ್ಣ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕಿನ ಆವಂದೂರಿನಲ್ಲಿ ಕವಿತಾ ಅವರ ತಾಯಿಯ ಅಂತ್ಯ ಸಂಸ್ಕಾರ ನೆರವೇರಿತು.