ಮಡಿಕೇರಿ: ಸೋಮವಾರಪೇಟೆ ತಾಲೂಕಿನ ಬಳಗುಂದ ಗ್ರಾಮದಲ್ಲಿ ಕೊಂಗಾಳ್ವರ ಕಾಲದ ಮೂರು ವೀರಗಲ್ಲು ಶಾಸನಗಳು ಪತ್ತೆಯಾಗಿವೆ.
ಇವು ಕ್ರಿ.ಶ.11-12ನೇ ಶತಮಾನಕ್ಕೆ ಸೇರಿದ್ದಾಗಿದ್ದು, ಬಳಗುಂದ ಗ್ರಾಮದಲ್ಲಿ ಸ್ಥಳ ಪರಿಶೀಲನೆಗೆ ತೆರಳಿದಾಗ ಕೆ.ಆರ್.ಪೂವಯ್ಯ ಎಂಬವರ ಕಾಫಿ ತೋಟದಲ್ಲಿ ಶಾಸನಗಳು ಪತ್ತೆಯಾಗಿವೆ.
ಈ ವೀರಗಲ್ಲು ಶಾಸನ ವೀರದುದ್ದ ಎಂಬಾತ ಕೊಂಗಾಳ್ವ ದೊರೆ. ಈತನಿಗೂ ಹೊಯ್ಸಳ ದೊರೆ ಒಂದನೆಯ ನರಸಿಂಹನಿಗೂ ಮೊಳತೆ ಎಂಬಲ್ಲಿ ನಡೆದ ಹೋರಾಟದಲ್ಲಿ ಮೃತಪಟ್ಟ ವೀರ ಬಂಮಗೌಡ. ಆತನಿಗೆ ಹಾಕಿಸಿದ ವೀರಗಲ್ಲು ಶಾಸನವಾಗಿದೆ.
ತಾರಾ ಅವರ ನಗರೂರು ತೋಟದಲ್ಲಿರುವ ವೀರಗಲ್ಲು 9 ಸಾಲುಗಳ ಶಾಸನ ಹೊಂದಿದ್ದು ಕೊಂಗಾಳ್ವ ದೊರೆ ಮನಿಜನ ತರುವಾಯ ಬಂದ ದೊರೆ ಬಡಿವ ಅಥವಾ ಕಾಡವ ಈತನ ಆಳ್ವಿಕೆಗೆ ಸೇರಿದ ವೀರಗಲ್ಲಾಗಿದೆ.
ಮಹಾಲಿಂಗೇಶ್ವರ ದೇವಾಲಯದ ಸಮೀಪವಿರುವ ವೀರಗಲ್ಲು ಸವೆದು ಹೋಗಿದ್ದು, ಹೆಚ್ಚಿನ ವಿವರಗಳು ದೊರೆತಿರುವುದಿಲ್ಲ. ಕೊನೆಯ ಪಟ್ಟಿಕೆಯಲ್ಲಿನ ಅಕ್ಷರಗಳನ್ನು ಆಧರಿಸಿ ಇದು ಕ್ರಿ.ಶ.12ನೇ ಶತಮಾನಕ್ಕೆ ಸೇರಿದ್ದಾಗಿದೆ ಎಂದು ಹೇಳಬಹುದಾಗಿದೆ.
ಶಾಸನ ಪತ್ತೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚನ್ನಕೇಶವ ಹಾಗೂ ಸ್ಥಳೀಯರು ಸಹಕರಿಸಿದ್ದು, ಶಾಸನವನ್ನು ಮೈಸೂರಿನ ಡಾ.ಎಚ್.ಎಂ.ನಾಗರಾಜ್ ರಾವ್ ಅವರು ಓದಿಕೊಟ್ಟಿರುತ್ತಾರೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯುರೇಟರ್ ಬಿ.ಪಿ.ರೇಖಾ ಅವರು ತಿಳಿಸಿದ್ದಾರೆ.