Wednesday, August 10, 2022

Latest Posts

ಮತದಾರರ ಎದುರು ಬಂಡೆ, ಹುಲಿಯಾ, ಟ್ರಬಲ್ ಶೂಟರ್ ಯಾವುದೂ ಇಲ್ಲ: ನಳಿನ್ ಕುಮಾರ್ ಕಟೀಲ್

ಹೊಸ ದಿಗಂತ ವರದಿ, ಮಂಗಳೂರು:

ಶಿರಾದಲ್ಲಿ ಗೆಲುವಿಗೆ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಪರಿಶ್ರಮ ಹಾಕಿದ್ದಾರೆ. ಬಿಜೆಪಿ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ತಂತ್ರಗಾರಿಕೆಯಿಂದ ಕೆಲಸ ಮಾಡಿದ್ದಾರೆ. ಇದು ಬಿಜೆಪಿಗೆ ಗೆಲುವು ತಂದುಕೊಟ್ಟಿದೆ. ಕೆ.ಆರ್. ಪೇಟೆಯಲ್ಲೂ ಅದನ್ನೇ ಮಾಡಿದ್ದರು. ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗ ಹಾಗೂ ಬಿಜೆಪಿ ಬಲ ಕ್ಷೀಣವಾಗಿರುವಲ್ಲಿ ಈ ತಂತ್ರಗಾರಿಕೆ ಮೂಲಕ ಚುನಾವಣೆ ಗೆಲ್ಲುತ್ತೇವೆ..
ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ.
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಮಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.
ಆರ್‌ಆರ್ ನಗರ, ಶಿರಾದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ವಿಶ್ವಾಸವಿತ್ತು. ಶಿರಾದಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಗೆದ್ದಿದೆ. ಹೊಸ ಮುಖವಾದ ರಾಜೇಶ್ ಗೌಡ ಅವರ ಮೇಲೆ ಮತದಾರರಿಗೆ ವಿಶ್ವಾಸವಿತ್ತು. ಕಾಂಗ್ರೆಸ್ ಇಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ಬಗ್ಗೆ ಜನರಲ್ಲಿ ಆಕ್ರೋಶವಿತ್ತು. ಯಡಿಯೂರಪ್ಪ ಅವರ ಅಭಿವೃದ್ಧಿ ಕಾರ್ಯ ಹಾಗೂ ನಮ್ಮ ಟೀಮ್‌ನ ಕೆಲಸ, ಕಾರ್ಯಕರ್ತರ ಪರಿಶ್ರಮ ಗೆಲುವು ತಂದುಕೊಟ್ಟಿದೆ ಎಂದರು.
ಚುನಾವಣೆ ಸಂದರ್ಭ ಕಾಂಗ್ರೆಸ್ ಮುಖಂಡರು ಅಹಂಕಾರದ ವರ್ತನೆ ತೋರಿದ್ದಾರೆ. ಮುಖ್ಯಮಂತ್ರಿ ಬಗ್ಗೆ ಅಗೌರವದಿಂದ ಮಾತನಾಡಿದ್ದಾರೆ. ಜಾತಿ ರಾಜಕಾರಣದ ಮೂಲಕ ಜಾತಿಗಳನ್ನು ಎತ್ತಿಕಟ್ಟಲು ಯತ್ನಿಸಿದರು. ಗೂಂಡಾಗಿರಿ ನಡೆಸಿದರು. ಆದರೆ, ಜನರು ಕಾಂಗ್ರೆಸ್‌ನ್ನು ತಿರಸ್ಕರಿಸಿದ್ದಾರೆ. ಸರಕಾರದ ಕೆಲಸಗಳನ್ನು ಜನ ಒಪ್ಪಿದ್ದಾರೆ. ಅಭಿವೃದ್ಧಿಯ ಎದುರು ಗೂಂಡಾಗಿರಿ ನಡೆಯಲಿಲ್ಲ. ಮುಂದಿನ ವಿಧಾನಸಭೆಯ ೨ ಹಾಗೂ ಲೋಕಸಭೆಯ ಒಂದು ಸ್ಥಾನದ ಉಪಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಖಚಿತ ಎಂದು ನಳಿನ್ ಹೇಳಿದರು.
ದೇಶದಲ್ಲಿ ನರೇಂದ್ರ ಮೋದಿ ಅವರ ಪರ ಅಲೆ ಇದೆ. ಜನರು ನರೇಂದ್ರ ಮೋದಿ ಅವರ ಮೇಲೆ ನಂಬಿಕೆ, ವಿಶ್ವಾಸ, ಪ್ರೀತಿ ಇಟ್ಟಿದ್ದಾರೆ. ದೇಶದ ಭವಿಷ್ಯ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿದೆ ಎಂಬುದನ್ನು ಜನರು ಅರಿತು ಮತ್ತೆ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ. ಮೋದಿ ಪ್ರಚಾರ ನಡೆಸಿದಲ್ಲಿ ಬಿಜೆಪಿ ಗೆಲ್ಲುತ್ತಲೇ ಇದೆ ಎಂದು ಬಿಹಾರದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ನಳಿನ್ ಪ್ರತಿಕ್ರಿಯಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss