ನಟ ಗೋಲ್ಡನ್ ಸ್ಟಾರ್ ಗಣೇಶ್ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಕೊನೆಯದಾಗಿ ಗಣೇಶ್ ’ಗೀತಾ’ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಈ ನಡುವೆ ಗಣೇಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಐದಾರು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿರುವ ಗಣಿ ಮತ್ತೊಂದು ಚಿತ್ರಕ್ಕೆ ಸಹಿ ಮಾಡಿದ್ದಾರೆ. ಹೆಚ್ಚಾಗಿ ರೊಮ್ಯಾಂಟಿಕ್ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ಗಣೇಶ್ ಈಗ ಮತ್ತೆ ಡಾಕ್ಟರ್ ಆಗಿ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಹೌದು, ಗಣೇಶ್ ಸದ್ಯ ಸಹಿ ಮಾಡಿರುವ ಹೊಸ ಸಿನಿಮಾದಲ್ಲಿ ಗಣೇಶ್ ನ್ಯೂರೋಸರ್ಜನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ವಿಶೇಷ ಅಂದರೆ ಈ ಸಿನಿಮಾಗೆ ನಿರ್ದೇಶನ ಮತ್ತು ನಿರ್ಮಾಣ ಮಾಡುತ್ತಿರುವುದು ಸಹ ವೈದ್ಯರು. ಡಾ.ಶಶಿಕಲಾ ಪಿ ನಿರ್ದೇಶನ ಮಾಡುತ್ತಿದ್ದಾರೆ. ಡಾ. ಶೈಲೇಶ್ ಕುಮಾರ್ ಬಂಡವಾಳ ಹೂಡುತ್ತಿದ್ದಾರೆ.