Tuesday, July 5, 2022

Latest Posts

ಮತ ಎಣಿಕೆಗೆ ಎರಡು ದಿನ ಬಾಕಿ: ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಅಭ್ಯರ್ಥಿಗಳು!

ಹೊಸದಿಗಂತ ವರದಿ, ಕೊಪ್ಪಳ: 

ಜಿಲ್ಲೆಯಲ್ಲಿ ಎರಡೂ ಹಂತದ ಗ್ರಾಮ ಪಂಚಾಯತ್​ ಚುನಾವಣೆ ಮುಕ್ತಾಯಗೊಂಡು ಮತ ಎಣಿಕೆಗೆ ಕೇವಲ ಎರಡು ದಿನ ಬಾಕಿ ಉಳಿದಿದ್ದು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಎದೆಯಲ್ಲಿ ಢವಢವ ಶುರುವಾಗಿದೆ. ಅಭ್ಯರ್ಥಿಗಳ ಜೊತೆಗೆ ಚುನಾವಣೆಯಲ್ಲಿ ಓಡಾಡಿರುವ ಹಳ್ಳಿ ಮುಖಂಡರಲ್ಲಿ ಹಾಗೂ ಜನರಲ್ಲಿಯೂ ಸೋಲು ಗೇಲುವಿನ ಲೆಕ್ಕಾಚಾರ ಆರಂಭವಾಗಿದೆ.
ಜಿಲ್ಲೆಯ ಕೊಪ್ಪಳ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕುಕನೂರು, ಕಾರಟಗಿ ಹಾಗೂ ಕನಕಗಿರಿ ಸೇರಿ ಒಟ್ಟು ಏಳು ತಾಲೂಕುಗಳ 149 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಈಗಾಗಲೇ ಮತದಾನ ನಡೆದಿದೆ. ಜಿಲ್ಲೆಯ 149 ಗ್ರಾಮ ಪಂಚಾಯತ್​ಗಳ 2,696 ಸ್ಥಾನಗಳಲ್ಲಿ 280 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ ಒಟ್ಟು 2,416 ಸ್ಥಾನಗಳಿಗೆ ನಡೆದ ಚುನಾವಣೆಯ ಅಂತಿಮ ಕಣದಲ್ಲಿರುವ ಒಟ್ಟು 6436 ಜನ ಅಭ್ಯರ್ಥಿಗಳ ಹಣೆ ಬರಹವನ್ನು ಮತದಾರರು ಎರಡು ಹಂತದಲ್ಲಿ ಬರೆದು ಮತಪೆಟ್ಟಿಗೆಯಲ್ಲಿ ಇರಿಸಿದ್ದಾರೆ.
ಇದೇ ಡಿಸೆಂಬರ್ 30 ರಂದು ಮತ ಎಣಿಕೆ ನಡೆಯಲಿದ್ದು ಅಭ್ಯರ್ಥಿಗಳಲ್ಲಿ ಹಾಗೂ ಅವರ ಬೆಂಬಲಿಗರಲ್ಲಿ ಢವಢವ ಶುರುವಾಗಿದೆ. ಮತ ಎಣಿಕೆಗೆ ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿರುವುದರಿಂದ ಸಹಜವಾಗಿ ಕುತೂಹಲ ಹೆಚ್ಚಾಗಿದೆ. ಮತದಾನದ ದಿನದಂದು ತಮ್ಮ ವಾರ್ಡ್​ನಲ್ಲಿರುವ ತಮ್ಮ ಪರವಾದ ಕುಟುಂಬಗಳಲ್ಲಿ ತಮಗೆ ಬರಬಹುದಾದ ಮತಗಳ ಲೆಕ್ಕಾಚಾರ ಹಾಕಿಕೊಂಡಿರುವ ಅಭ್ಯರ್ಥಿಗಳು ತಾವೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಮಾತನಾಡದಿದ್ದರೂ ಕೆಲವರು ಮತದಾರರ ಕೈಕಾಲು ಮುಗಿದು ತಮಗೆ ಮತಹಾಕಿ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.
ಮತದಾನದ ಬಳಿಕ ಆಗಿರುವ ಮತದಾನದ ಪ್ರಮಾಣದ ಮೇಲೆ ತಮ್ಮದೆ ರೀತಿಯಲ್ಲಿ ಅಭ್ಯರ್ಥಿಗಳು ಲೆಕ್ಕಾಚಾರ ಮಾಡಿಕೊಂಡಿದ್ದಾರೆ.
ತಮ್ಮದೇ ಲೆಕ್ಕಾಚಾರದಲ್ಲಿದ್ದರೂ ಲೆಕ್ಕ ಪಕ್ಕಾ ಆಗದಿದ್ದರೂ ಸಹ ಅಭ್ಯರ್ಥಿಗಳು ಗೆಲುವು ತಮ್ಮದೆ ಎಂದು ಹೇಳುತ್ತಿದ್ದಾರೆ. ಕುಂತರೂ, ನಿಂತರೂ ಸಹ ಸೋಲು-ಗೆಲುವಿನ ಚಿಂತೆಯಲ್ಲಿ ಮುಳುಗಿದ್ದಾರೆ.
ಆಯ್ಕೆಯಾದರೆ ಜನರ ಸೇವೆ, ಗ್ರಾಮದ ಅಭಿವೃದ್ದಿಗಾಗಿ ಕೆಲಸ ಮಾಡಬೇಕು ಎಂಬ ಸ್ಪರ್ಧೆ ಮಾಡಿದ್ದೇವೆ. ಮತದಾರರು ನಮ್ಮನ್ನು ಕೈಹಿಡಿಯುತ್ತಾರೆ ಎಂಬ ಆಶಾಭಾವವಿದೆ. ರಿಸಲ್ಟ್​ಗೆ ಇನ್ನೊಂದು ದಿನ ಉಳಿದಿರುವುದರಿಂದ ಸಹಜವಾಗಿ ಕುತೂಹಲವಿದೆ. ನಾವು ಗೆಲ್ಲುತ್ತೇವಾ ಅಥವಾ ಸೋಲುತ್ತೇವಾ ಎಂಬ ಕುತೂಹಲವಿದೆ. ಹೀಗಾಗಿ ಫಲಿತಾಂಶದ ದಿನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ ಎನ್ನುತ್ತಾರೆ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಜನರು.
ಸೋಲು ಗೆಲುವಿನ ಚಿಂತೆಯಲ್ಲಿ ಅಭ್ಯರ್ಥಿಗಳು ಕಾಲದೂಡುತ್ತಿದ್ದರೆ ಗ್ರಾಮೀಣ ಪ್ರದೇಶದಲ್ಲಿ ಯಾರು ನಮ್ಮ ವಾರ್ಡ್ ನ ಸದಸ್ಯರಾಗ್ತಾರೆ ಎಂದು ಆಯಾ ವಾರ್ಡ್, ಗ್ರಾಮಗಳ ಜನರು ಕುತೂಹಲದಿಂದ ಕಾಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss