Friday, July 1, 2022

Latest Posts

ಮದುವೆ ದಿಬ್ಬಣ ಕರೆದೊಯ್ಯುತ್ತಿದ್ದ ಬಸ್ ಅವಘಡ: ಇಬ್ಬರು ಮಕ್ಕಳ ಸಹಿತ 7 ಮಂದಿ ಸಾವು

ಹೊಸ ದಿಗಂತ ವರದಿ, ಮಡಿಕೇರಿ:

ಮದುವೆ ದಿಬ್ಬಣವನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ ಅವಘಡಕ್ಕೀಡಾಗಿ ಇಬ್ಬರು ಮಕ್ಕಳ ಸಹಿತ 7 ಮಂದಿ ಸಾವಿಗೀಡಾಗಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕೊಡಗಿನ ಗಡಿ ಭಾಗವಾದ ಕರಿಕೆ ಬಳಿ ಭಾನುವಾರ ಸಂಭವಿಸಿದೆ.
ಮೃತರನ್ನು ರಾಜೇಶ್,ರವಿಚಂದ್ರ, ಆದರ್ಶ್, ಶ್ರೇಯಸ್ಸ್, ಸುಮತಿ, ಶಶಿ ಹಾಗೂ ಜಯಲಕ್ಷ್ಮಿ ಎಂದು ಗುರುತಿಸಲಾಗಿದೆ.
ಕರಿಕೆ ಗ್ರಾಮ ಪಂಚಾಯತ್‍ನಲ್ಲಿ ವಾಟರ್‍ಮ್ಯಾನ್ ಆಗಿರುವ ಚೆತ್ತುಕಾಯದ ಪ್ರಶಾಂತ್ ಎಂಬವರ ಮದುವೆ ಈಶ್ವರಮಂಗಲದ ಯುವತಿಯೊಂದಿಗೆ ನಿಶ್ವಯವಾಗಿದ್ದು, ಭಾನುವಾರ ಕರಿಕೆಯ ವರನ ನಡೆಯಲಿದ್ದ ವಿವಾಹಕ್ಕೆ ಸುಳ್ಯದ ಆಲೆಟ್ಟಿ ಮೂಲಕ ಕೇರಳದ ಪಾಣತ್ತೂರಿಗಾಗಿ ಕರಿಕೆಗೆ ವಧುವಿನ ದಿಬ್ಬಣ ಆಗಮಿಸಬೇಕಿತ್ತು.
ವಧುವಿನ ಊರಾದ ಈಶ್ವರ ಮಂಗಲದಿಂದ ವಧು ಮತ್ತು ಕೆಲವು ಮಂದಿ ಟೆಂಪೋ ಟ್ರಾವೆಲರ್‍ನಲ್ಲಿ ಪ್ರಯಾಣಿಸುತ್ತಿದ್ದರೆ, ಮಕ್ಕಳು ಸೇರಿದಂತೆ ಸುಮಾರು 60 ಮಂದಿ ಹಿಂದಿನಿಂದ ಕೆಎ19-ಎಎ1539ರ ಖಾಸಗಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದೆ.
ಸುಳ್ಯದಿಂದ ಕಲ್ಲಪ್ಪಳ್ಳಿ-ಪಾಣತ್ತೂರು ಮಾರ್ಗದ ಮಧ್ಯೆ ಪೆರಿಯಾರಂ ಎಂಬಲ್ಲಿನ ಕಡಿದಾದ ಇಳಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಮನೆಯೊಂದರ ಮೇಲೆ ಉರುಳಿ ಬಿದ್ದಿದ್ದು, ಈ ಸಂದರ್ಭ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 7 ಮಂದಿ ಸಾವಿಗೀಡಾಗಿದ್ದು, ಗಾಯಾಳುಗಳನ್ನು ಕಾಂಞಂಗಾಡ್ ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಈ ಪೈಕಿ 10ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.
ಘಟನೆಯ ತನಿಖೆಗೆ ಕೇರಳ ರಾಜ್ಯದ ಸಾರಿಗೆ ಮಂತ್ರಿ ಆದೇಶಿಸಿದ್ದು, ಕಾಸರಗೋಡು ಜಿಲ್ಲಾಧಿಕಾರಿಯವರು ಕಾಞಂಗಾಡ್ ಸಹಾಯಕ ಕಮಿಷನರ್ ನೇತೃತ್ವದಲ್ಲಿ ತನಿಖೆ ನಡೆಸಲಿರುವುದಾಗಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss