ಮದ್ದೂರು : ಕೊರೋನಾ ಸೋಂಕು ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಗ್ರಾಮವನ್ನು ಹತ್ತು ದಿನಗಳ ಕಾಲ ಸೀಲ್ಡೌನ್ ಮಾಡಲು ತಾಲೂಕಿನ ಗೆಜ್ಜಲಗೆರೆ ಗ್ರಾಮಸ್ಥರು ನಿರ್ಧಾರ ಕೈಗೊಂಡಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಸಭೆ ನಡೆಸಿದ ಗ್ರಾಮದ ಹಿರಿಯ ಮುಖಂಡರು ಹಾಗೂ ಮಾಜಿ ಜನಪ್ರತಿನಿಧಿಗಳು, ಜು. 29ರಿಂದ ಗ್ರಾಮವನ್ನು ಸ್ವಯಂಪ್ರೇರಿತವಾಗಿ ಸೀಲ್ಡೌನ್ ಮಾಡಲು ತೀರ್ಮಾನ ಕೈಗೊಂಡರು.
ಗ್ರಾಮದ ಅಂಗಡಿ ಮುಂಗಟ್ಟುಗಳನ್ನು ಬೆಳಗ್ಗೆ 6 ರಿಂದ 9ರವರೆಗೆ ತೆರೆದು ವ್ಯಾಪಾರ ವಹಿವಾಟು ನಡೆಸಿದ ಬಳಿಕ ಬಂದ್ ಮಾಡಬೇಕು. ಗೆಜ್ಜಲಗೆರೆ ಆಸುಪಾಸಿನ ಗ್ರಾಮಗಳಲ್ಲಿ ಈಗಾಗಲೇ ಏಳು ಮಂದಿ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಇಡೀ ಗ್ರಾಮವನ್ನು ಸ್ಯಾನಿಟೈಸರ್ ಸಿಂಪಡಿಸಬೇಕು. ಕಡ್ಡಾಯವಾಗಿ ಜನರು ಮಾಸ್ಕ್ ಧರಿಸಬೇಕು. ವೃದ್ಧರು ಮತ್ತು ಮಕ್ಕಳು ಮನೆಯಿಂದ ಹೊರಗೆ ಬರದೆ ಕೊರೋನಾ ಸೋಂಕು ತಡೆಗೆ ಸಹಕಾರ ನೀಡುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಲ್ಲಿ ಹೊರ ರಾಜ್ಯಗಳಿಂದ ಬಂದ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಂದ ಕೊರೋನಾ ಸೋಂಕು ಹರಡುವ ಭೀತಿ ಇರುವುದರಿಂದ ಗ್ರಾಮದಿಂದ ಕಾರ್ಖಾನೆ ಕೆಲಸಕ್ಕೆ ಹೋಗುವ ಸ್ಥಳೀಯ ಕಾರ್ಮಿಕರು ಹತ್ತು ದಿನಗಳ ಕಾಲ ರಜೆ ಪಡೆದು ಮನೆಯಲ್ಲೇ ಇರಬೇಕು. ಒಂದು ವೇಳೆ ಕಾರ್ಖಾನೆ ಕೆಲಸ ಹೋದರೆ 10 ದಿನಗಳ ಕಾಲ ಗ್ರಾಮಕ್ಕೆ ಪ್ರವೇಶ ಮಾಡದಂತೆ ನಿಷೇಧ ಹೇರುವುದರ ಜೊತೆಗೆ ಕಾರ್ಖಾನೆಗಳ ಮಾಲೀಕರು ಸೋಂಕು ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಗ್ರಾಮ ಪಂಚಾಯಿತಿ ವತಿಯಿಂದ ನೋಟೀಸ್ ನೀಡಲು ತೀರ್ಮಾನಿಸಲಾಯಿತು.