ಮದ್ದೂರು : ನಿಷೇದಾಜ್ಞೆ ಉಲ್ಲಂಘಿಸಿ ಎಳನೀರು ವಹಿವಾಟು ನಡೆಸಿ ಸಾಗಾಣಿಕೆ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ಎರಡು ಲಾರಿ ಮತ್ತು ಗೂಡ್ಸ್ ವಾಹನವೊಂದನ್ನು ಭಾನುವಾರ ವಶಪಡಿಸಿಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಚಾಲಕ ಹಾಗೂ ಕ್ಲೀನರ್ಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ವಹಿವಾಟು ಹಾಗೂ ಹೊರ ರಾಜ್ಯಗಳ ಲಾರಿಗಳಿಗೆ ಎಳನೀರು ಸಾಗಾಣಿಕೆಗೆ ತಾಲೂಕು ಆಡಳಿತ ನಿರ್ಬಂಧ ವಿಧಿಸಿ ಆದೇಶ ಹೊರಡಿಸಲಾಗಿತ್ತು. ಮಹಾರಾಷ್ಟ್ರ ಮೂಲದ ಚಾಲಕ ಮತ್ತು ಕ್ಲೀನರ್ಗಳೊಂದಿಗೆ ಎಪಿಎಂಸಿಯ ಕೆಲ ವರ್ತಕರು ಶಾಮೀಲಾಗಿ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ನಿರ್ಜನ ಪ್ರದೇಶವೊಂದರಲ್ಲಿ ಹಳ್ಳಿಗಳಿಂದ ಬೊಲೇರೋ ವಾಹನಗಳಲ್ಲಿ ಎಳನೀರು ತಂದು ಮಹಾರಾಷ್ಟ್ರ ಮೂಲದ ಲಾರಿಗಳಿಗೆ ತುಂಬಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಅರಿತ ತಹಸೀಲ್ದಾರ್ ಎಚ್.ವಿ. ವಿಜಯಕುಮಾರ್ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಲಾರಿಗಳಿಗೆ ಮತ್ತು ಎಳನೀರು ತುಂಬುತ್ತಿದ್ದ ಚಾಲಕ ಮತ್ತು ಕ್ಲೀನರ್ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.