ಮದ್ದೂರು: ಗ್ರಾಮೀಣ ಪ್ರದೇಶಗಳಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟಲು ಕೆ.ಎಂ.ದೊಡ್ಡಿ ಸಬ್ ಇನ್ಸ್ ಪೆಕ್ಟರ್ ಶೇಷಾದ್ರಿ ಕಾರ್ಯಾಚರಣೆಗಿಳಿದಿದ್ದಾರೆ. ಬೆಳ್ಳಂಬೆಳಿಗ್ಗೆಯೇ ಬೈಕ್ ಏರಿ ಸಾಮಾನ್ಯರಂತೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ, ಅಲ್ಲಿನ ಅಕ್ರಮ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ ಕಲೆ ಹಾಕುವ ಮೂಲಕ ಪ್ರಕರಣ ದಾಖಲಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ಗೂಡಂಗಡಿ, ಪೆಟ್ಟಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಶೇಷಾದ್ರಿ ಬೀದಿಗಿಳಿದು ಕಾರ್ಯಾಚರಣೆ ಮಾಡಲು ಮುಂದಾಗಿದ್ದಾರೆ. ಪ್ರಸ್ತುತ ಮದ್ಯ ಅಕ್ರಮ ಮಾರಾಟ ನಡೆಯುತ್ತಿರುವುದರಿಂದ ಗ್ರಾಮಗಳಲ್ಲಿ ಶಾಂತಿ ಮಾಯವಾಗಿದ್ದು, ಗಲಾಟೆಗಳು, ಮನಸ್ತಾಪಗಳು ಹೆಚ್ಚಾಗಿದೆ. ಸುಲಭವಾಗಿ ಮದ್ಯ ಕೈಗೆ ಸಿಗುತ್ತಿರುವುದರಿಂದ ಹೆಚ್ಚು ಮದ್ಯ ಸೇವನೆ ವ್ಯಸನಿಗಳಾಗಿದ್ದಾರೆ. ಕುಡುಕರ ಹಾವಳಿಯಿಂದ ಮಹಿಳೆಯರು ಮತ್ತು ಮಕ್ಕಳು ನೆಮ್ಮದಿಯಾಗಿ ಗ್ರಾಮದಲ್ಲಿ ಓಡಾಡದಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಲಾಕ್ಡೌನ್ನಿಂದ ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಮದ್ಯ ವ್ಯಸನಿಗಳು ಮಾತ್ರ ಮದ್ಯಕ್ಕಾಗಿ ಇಂಥ ಮಾರ್ಗಗಳನ್ನು ಹಿಡಿದುಕೊಂಡಿದ್ದಾರೆ. ಇದರಿಂದ ಸಂಸಾರಗಳು ಬೀದಿಪಾಲಾಗುವಂತಾಗಿದೆ. ಆದ್ದರಿಂದ ಇದಕ್ಕೆಲ್ಲ ಕಡಿವಾಣ ಹಾಕುವ ದೃಷ್ಟಿಯಿಂದ ಈ ರೀತಿ ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಬ್ ಇನ್ಸ್ ಪೆಕ್ಟರ್ ಶೇಷಾದ್ರಿ ಹೇಳಿದರು.