ಹೊಸದಿಗಂತ ವರದಿ, ಚಿತ್ರದುರ್ಗ:
ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಳ್ಳಕೆರೆ
ಹಾಗೂ ಮೊಳಕಾಲ್ಮುರಿನ ತಾಲ್ಲೂಕಿನ ನೆರೆಯ ಆಂಧ್ರಪ್ರದೇಶದ ಗಡಿಭಾಗದ ಗ್ರಾಮಗಳಿಗೆ ಮದ್ಯದಂಗಡಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು, ಗ್ರಾಮಸ್ಥರು ವಿರೋಧಿಸಿದರೂ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಂಧ್ರದ ಗಡಿಭಾಗದಲ್ಲಿ ಮದ್ಯದಂಗಡಿಗಳನ್ನು ತೆರೆಯುವಂತೆ ಹೊಸದಾಗಿ 35 ಅರ್ಜಿಗಳು ಬಂದಿವೆ. ಹೊಸದಾಗಿ ಯಾವುದೇ ಅನುಮತಿ ನೀಡಬಾರದು. ಜೊತೆಗೆ ಈ ಕುರಿತು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಸಚಿವರು ಸೂಚಿಸಿದರು. ತಪ್ಪೆಸಗಿದ ಅಬಕಾರಿ ಉಪ ಆಯುಕ್ತರ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವ ಕುರಿತು ಸಭೆ ತೀರ್ಮಾನಿಸಿತು.
ಜಿ.ಪಂ. ಹೊರಗುತ್ತಿಗೆ ನೌಕರರ ಇಎಸ್ಐ ಮತ್ತು ಪಿಎಫ್ ಹಣ ದುರುಪಯೋಗದ ಕುರಿತು ಯಾವ ಕ್ರಮಕೈಗೊಳ್ಳಲಾಗಿದೆ ಎಂದು ಜಿ.ಹೆಚ್.ತಿಪ್ಪಾರೆಡ್ಡಿ ಪ್ರಶ್ನಿಸಿದರು. ಜಿ.ಪಂ. ಉಪ ಕಾರ್ಯದರ್ಶಿ ಮಹಮದ್ ಮುಬೀನ್ ಪ್ರತಿಕ್ರಿಯಿಸಿ, ರಶ್ಮಿ ಕಂಪ್ಯೂಟರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಸ್ಥೆಯವರು ಉಚ್ಛ ನ್ಯಾಯಾಲಯದಲ್ಲಿ ಸ್ಟೇ ಪಡೆಯಲು ಪ್ರಕರಣ ದಾಖಲಿಸಿದ್ದಾರೆ. 6 ವಾರದೊಳಗೆ 18 ಲಕ್ಷ ಜಮಾ ಮಾಡಲು ನ್ಯಾಯಾಲಯ ಆದೇಶಿಸಿದೆ ಎಂದು ಮಾಹಿತಿ ನೀಡಿದರು.
ಶಾಲೆಗಳಿಗೆ ಕಾಯಕಲ್ಪ ಕೊಡಿ
ನರೇಗಾ ಯೋಜನೆಯಡಿ ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಗೊಳ್ಳಬೇಕು. ಕಾಮಗಾರಿ ನಿರ್ಮಾಣದಲ್ಲಿ 60:40 ಅನುಪಾತದ ಕಾರಣಕ್ಕಾಗಿ ಶಾಲಾ ಕಾಂಪೌಂಡ್ ನಿರ್ಮಾಣದ ಕಾಮಗಾರಿ ಕೈಬಿಡಕೂಡದು. ಪ್ರತಿ ವರ್ಷವೂ ನಿರಂತರವಾಗಿ ಕಾಮಗಾರಿಕೈಗೊಂಡು ಪ್ರತಿ ಶಾಲೆಗೂ ಕಾಂಪೌಂಡ್ ನಿರ್ಮಾಣ ಮಾಡಬೇಕು ಎಂದು ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ರಾಜ್ಯದ 50 ಕಡೆಗಳಲ್ಲಿ 6 ರಿಂದ 12ನೇ ತರಗತಿವರೆಗೆ ಕೇಂದ್ರಿಯ ಶಿಕ್ಷಣ ಮಾದರಿಯಲ್ಲಿ ಶಿಕ್ಷಣ ನೀಲು ಉದ್ದೇಶಿಸಲಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಾಗಿರುವ, ವಿಶಾಲವಾದ ಜಾಗ ಇರುವ ಜಿಲ್ಲೆಯ ಯಾವುದಾದರೂ ಒಂದು ಪಂಚಾಯಿತಿ ಹೆಸರನ್ನು ಆಯ್ಕೆ ಮಾಡಿಕೊಡಿ. ಶಿಕ್ಷಣ ಸಚಿವರೊಂದಿಗೆ ಮಾತನಾಡಿ, ಒಂದು ಮಾದರಿ ಶಾಲೆ ಮಾಡೋಣ ಎಂದು ಡಿಡಿಪಿಐಗೆ ಸೂಚಿಸಿದರು.
ಸಭೆಯಲ್ಲಿ ಶಾಸಕರಾದ ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ಜಿ.ಪಂ. ಅಧ್ಯಕ್ಷೆ ಶಶಿಕಲಾ, ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷೆ ತ್ರಿವೇಣಿ, ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.