ಹೊಸದಿಗಂತ ಆನ್ ಲೈನ್ ಡೆಸ್ಕ್:
ಆರ್ಥಿಕತೆಯನ್ನು ಪುನಶ್ಚೇತನಗಿಳಿಸಲು ಸಜ್ಜಾಗಿರುವ ರಾಜ್ಯ ಸರಕಾರ ಮಾರ್ಚ್ ಮೊದಲ ವಾರದಲ್ಲಿ ಮಂಡನೆಯಾಗಲಿರುವ ಬಜೆಟ್ ನಲ್ಲಿ ಮದ್ಯ ಪ್ರಿಯರಿಗೆ ಬೆಲೆ ಏರಿಕೆಯ ಕಿಕ್ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಹಾಗೂ ಬಿಯರ್ ಮೇಲೆ ಶೇ.5ರಿಂದ ಶೇ.10ರವರೆಗೆ ಅಬಕಾರಿ ಸುಂಕ ವಿಧಿಸಲು ಚಿಂತಿಸಿರುವ ಸರ್ಕಾರ, ಶೀಘ್ರದಲ್ಲೇ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಕಳೆದ ಬಜೆಟ್ನಲ್ಲಿ ಸರ್ಕಾರ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ಹೇರಿತ್ತು. ಕಳೆದ ಏಪ್ರಿಲ್ನಲ್ಲಿ ಜಾರಿ ಆಗಬೇಕಿದ್ದರೂ ಕರೊನಾ ನಿಯಂತ್ರಿಸಲು ಲಾಕ್ಡೌನ್ ಹೇರಿದ್ದರಿಂದ ಸಾಧ್ಯವಾಗಿರಲಿಲ್ಲ. ಬಳಿಕ ಮೇನಲ್ಲಿ ಬಿಯರ್ ಹಾಗೂ ವೈನ್ ಹೊರತುಪಡಿಸಿ ಐಎಂಎಲ್ ಮೇಲೆ ಶೇ.17 ಅಬಕಾರಿ ಸುಂಕ ಹೆಚ್ಚಿಸಿತ್ತು. ಇದರಿಂದ 180 ಎಂಎಲ್ ಬಾಟಲಿ ಮದ್ಯಕ್ಕೆ ಇರುವ ದರಕ್ಕಿಂತ ಆಂದಾಜು 16 ರೂ. ಹೆಚ್ಚಳವಾಗಿತ್ತು. ಅಲ್ಲದೆ, ಪ್ರತಿ ಬಲ್ಕ್ ಲೀಟರ್ಗೆ 153 ರೂ.ನಿಂದ 179 ರೂ.ಗೆ ಏರಿಕೆ ಆಗಿತ್ತು. ಎಂಟು ತಿಂಗಳು ಕಳೆಯುವಷ್ಟರಲ್ಲಿ ಮತ್ತೆ ಅಬಕಾರಿ ಸುಂಕ ವಿಧಿಸಲು ಸರ್ಕಾರ ಮುಂದಾಗಿದ್ದು, ಮದ್ಯ ಪ್ರಿಯರಲ್ಲಿ ಆತಂಕ ಶುರುವಾಗಿದೆ.