Sunday, August 14, 2022

Latest Posts

ಮನರೇಗಾ ಯೋಜನೆಯಡಿ ಕೃಷಿ, ತೋಟಗಾರಿಕೆ ಯೋಜನೆಗಳ ಅಳವಡಿಕೆಗೆ ಕ್ರಮ ಜರುಗಿಸಿ: ಸಂಸದ ಶಿವಕುಮಾರ ಉದಾಸಿ

ಹೊಸದಿಗಂತ ವರದಿ, ಹಾವೇರಿ:

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಹಾಗೂ ತೋಟಗಾರಿಕೆ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಅಧಿಕಾರಿಗಳಿಗೆ ಸೂಚಿಸಿದರು.

ಜಿ.ಪಂ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಮಿತಿಯ ತ್ರೈಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಶಾಲಾ ಕಂಪೌಂಡ, ಮೈದಾನ ಹಾಗೂ ಶೌಚಾಲಯ ನಿರ್ಮಿಸಲು ಅವಕಾಶವಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ. ಯೋಜನೆಗೆ ಹಣಕಾಸಿನ ಕೊರತೆ ಇಲ್ಲ.  ಕೂಡಲೇ ಫಲಾನುಭವಿಗಳಿಗೆ ಹಣ ಮಂಜೂರು ಮಾಡುವ ಕಾರ್ಯವಾಗಬೇಕು. ಈಗಾಗಲೇ ನಿವೇಶ ರಹಿತ ಹಾಗೂ ಮನೆ ರಹಿತರ ಸರ್ವೇ ಮಾಡಲಾಗಿದೆ.  ಅಂದಾಜು 85 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. ಮನೆ ಇಲ್ಲದವರಿಗೆ ಹಾಗೂ ನಿವೇಶನ ಹೊಂದಿದ ಫಲಾನುಭವಿಗಳಿಗೆ ಬರುವ ಮೂರು ವರ್ಷಗಳಲ್ಲಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಜಿ.ಪಂ ಸಿಇಓ ಮೊಹಮ್ಮದ ರೋಶನ್ ಮಾತನಾಡಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ದೀನ ದಯಾಳ ಯೋಜನೆಯಡಿ ಮೂರು ಸಂಸ್ಥೆಗಳಲ್ಲಿ ೪೮೮ ತರಬೇತಿ ಪಡೆದ ಅಭ್ಯರ್ಥಿಗಳ ಪೈಕಿ 477 ಅಭ್ಯರ್ಥಿಗಳು ಕೆಲಸ ನಿರ್ವಹಿಸುತ್ತಿದ್ದಾರೆ ಎಂದರು.

ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯ 622 ಹಳ್ಳಿಗಳಿಗೆ ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸಬೇಕಾಗಿದೆ. ಮೊದಲ 491 ಗ್ರಾಮಗಳನ್ನು ಗುರುತಿಸಲಾಗಿದೆ.  ಈಗಾಗಲೇ 365 ಗ್ರಾಮಗಳ ಸರ್ವೇ ಮಾಡಲಾಗಿದೆ. ಉಳಿದಂತೆ ಹಂತ ಹಂತವಾಗಿ ಮಾಡಲಾಗುವುದು. ನಾಲ್ಕೈದು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಮೂಲಕ ಮನೆಗೆ ನಲ್ಲಿ ನೀರು ಪೂರೈಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಉಪವಿಭಾಗಾಧಿಕಾರಿಗಳಾದ ಡಾ.ದಿಲೀಷ್ ಶಶಿ ಹಾಗೂ ಅನ್ನಪೂರ್ಣ ಮುದಕಮ್ಮನವರ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss