Saturday, August 13, 2022

Latest Posts

ಮನಸೆಳೆದ ಮೇಕೇರಿ ಪಂಚಾಯತ್: ಅಂಗನವಾಡಿ ಅಂಗಳದಲ್ಲಿ ನಳನಳಿಸಿದೆ ಉದ್ಯಾನವನ!

ಹೊಸದಿಗಂತ ವರದಿ ಮಡಿಕೇರಿ:

ನಗರ ಪ್ರದೇಶಗಳಿಗೆ, ವಸತಿ ಸಮುಚ್ಛಯಗಳಿಗೆ ಸೀಮಿತವಾಗಿದ್ದ ಉದ್ಯಾನವನಗಳು ಈಗ ಗ್ರಾಮದ ಅಂಗನವಾಡಿಗಳ ಅಂಗಳದಲ್ಲೂ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.

ರಾಜ್ಯದಲ್ಲೇ ಪ್ರಥಮ ಎನ್ನುವಂತೆ ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ಅಂಗನವಾಡಿಯ ಅಂಗಳದಲ್ಲಿ ಸುಂದರವಾದ ಉದ್ಯಾನವನವೊಂದು ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆ ಗೊಳ್ಳಲಿದೆ.

ಮೇಕೇರಿ ಗ್ರಾಮದ ಸುಭಾಷ್ ನಗರದ ಅಂಗನವಾಡಿಯ ಮುಂಭಾಗ ಗ್ರಾಮ ಪಂಚಾಯಿತಿ ವತಿಯಿಂದ ನಿರ್ಮಾಣವಾಗುತ್ತಿರುವ ಈ ಉದ್ಯಾನವನಕ್ಕೆ ಮೇಕೇರಿ ಸ್ವಾಗತ ಯುವಕ ಸಂಘ ಸಾಥ್ ನೀಡಿದ ಕಾರಣ ತಿಂಗಳಲ್ಲೇ ಉದ್ಘಾಟನೆಗೆ ಸಜ್ಜಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಈ ಉದ್ಯಾನವನ ಅಂಗನವಾಡಿಗೆ ಬರುವ ಪುಟ್ಟ ಮಕ್ಕಳ ಮನಸ್ಸಿನಲ್ಲಿ ಪರಿಸರ ಪ್ರೇಮವನ್ನು ಹುಟ್ಟು ಹಾಕಲು ಪ್ರೇರಣೆಯಾಗಲಿದೆ.
ಸುಮಾರು ಮೂರು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸುವ ಜವಾಬ್ದಾರಿಗೆ ಸ್ವಾಗತ ಯುವಕ ಸಂಘದ ಸದಸ್ಯರು ಕೈಜೋಡಿಸಿದ್ದಾರೆ.

ನಮ್ಮ ಬಡಾವಣೆಯಲ್ಲಿ ಇಂತಹ ಒಂದು ಸುಂದರ ಉದ್ಯಾನವನ ನಿರ್ಮಾಣವಾಗಿರುವುದು ನಮಗೆ ತುಂಬಾ ಖುಷಿ ಕೊಟ್ಟಿದೆ ಎನ್ನುತ್ತಾರೆ ಸುಭಾಷ್ ನಗರ ಬಡಾವಣೆಯ ನಿವಾಸಿಗಳು.

ಉದ್ಯಾನವನ ನಿರ್ಮಾಣದ ಕಲ್ಪನೆ ಮೇಕೇರಿ ಪಂಚಾಯಿತಿಯದ್ದಾದರೂ ಇದಕ್ಕೆ ಗ್ರಾಮಸ್ಥರ ಸಹಕಾರ ಉತ್ತಮವಾಗಿ ಲಭಿಸಿದೆ. ಮೇಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸುಭಾಷ್ ನಗರದ ಅಂಗನವಾಡಿಯ ಅಂಗಳದಲ್ಲಿ ನಿರ್ಮಾಣವಾಗುತ್ತಿರುವ ಉದ್ಯಾನವನ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮೇಕೇರಿಯ ಸ್ವಾಗತ ಯುವಕ ಸಂಘದ ಸದಸ್ಯರು ಯಾವುದೇ ಫಲಾಪೇಕ್ಷೆಯಿಲ್ಲದೆ ರಾತ್ರಿ, ಹಗಲೆನ್ನದೆ ದುಡಿಯುವ ಮೂಲಕ ಉದ್ಯಾನವನವನ್ನು ಸುಂದರಗೊಳಿಸುಳಿಸುವಲ್ಲಿ ಸಫಲರಾಗಿದ್ದಾರೆ.ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಮೇಕೇರಿ ಗ್ರಾಮ ಪಂಚಾಯಿತಿ‌ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಿಳಿಸಿದ್ದಾರೆ.

‌ನಗರ ಪ್ರದೇಶಗಳಿಗೇ ಸೀಮಿತ ಅನ್ನುವಂತಿದ್ದ ಉದ್ಯಾನವನಗಳು ಇದೀಗ ಗ್ರಾಮೀಣ ಭಾಗಗಳಲ್ಲೂ ನಿರ್ಮಾಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.ಹಿರಿಯರಿಗೆ ಉದ್ಯಾನವನದಲ್ಲಿ ವಾಕಿಂಗ್ ಏರಿಯಾ ಮತ್ತು ಸಣ್ಣ ಮಕ್ಕಳಿಗೆ ಆಟವಾಡಲು ಬೇಕಾದ ವ್ಯವಸ್ಥೆಗಳಿರುವುದರಿಂದ ಸಾರ್ವಜನಿಕರಿಗೆ ಅನುಕೂಲವೆನಿಸಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಕುಮಾರ್.

ನಮ್ಮ ಅಂಗನವಾಡಿಯಲ್ಲಿ ಉದ್ಯಾನವನ ನಿರ್ಮಿಸಲು ಶ್ರಮಿಸಿದ ಮೇಕೇರಿ ಗ್ರಾಮ ಪಂಚಾಯಿತಿ ಮತ್ತು ಸ್ವಾಗತ ಯುವಕ ಸಂಘಕ್ಕೆ ಧನ್ಯವಾದಗಳನ್ನು ಸಮರ್ಪಿಸುವುದಾ ಅಂಗನವಾಡಿ ಶಿಕ್ಷಕಿ ಸರಸ್ವತಿ ಹೇಳಿದ್ದಾರೆ.

ಗ್ರಾಮ ಪಂಚಾಯಿತಿಯವರು ಉದ್ಯಾನವನ ನಿರ್ಮಾಣದ ಕುರಿತು ನಮ್ಮ ಬಳಿ ಪ್ರಸ್ತಾಪಿಸಿದಾಗ ಸಂಘದ ಎಲ್ಲಾ ಸದಸ್ಯರೂ ಒಪ್ಪಿಕೊಂಡು ಪಂಚಾಯಿತಿಯೊಂದಿಗೆ ಕೈಜೋಡಿಸಿರುವುದಾಗಿ
ಸ್ವಾಗತ ಯುವಕ ಸಂಘದ ಅಧ್ಯಕ್ಷ ವಿಜು ಹರೀಶ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss