ಮಂಗಳೂರು: ಧರ್ಮ ಎಂಬುದು ನಮ್ಮ ಬದುಕಿನ ಹಾದಿ. ಅದು ನಮ್ಮ ಬದುಕಿನ ಚೌಕಟ್ಟು, ಸಂಸ್ಕೃತಿ, ಸಂಸ್ಕಾರ. ಭಾರತೀಯ ಬದುಕು ಶ್ರೇಷ್ಠವಾದುದು. ಇದಕ್ಕೆ ವಿಶ್ವವೇ ಮನ್ನಣೆ ನೀಡಿದೆ. ಪ್ರಸ್ತುತ ಸಂದಿಗ್ದ ಸ್ಥಿತಿಯಲ್ಲಿ ನಮ್ಮ ಮನಸ್ಸಿನ ಖಿನ್ನತೆಗಳಿಗೆ ನಮ್ಮ ಧರ್ಮದ ಸಾರಗಳೇ ಪರಿಹಾರವಾಗಿದೆ ಎಂದು ಆಧ್ಯಾತ್ಮಿಕ ಗುರು,ಅಂತಾರಾಷ್ಟ್ರೀಯ ವಾಸ್ತು ತಜ್ಞ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಸೋಮವಾರ ವೆಬಿನಾರ್ ಮೂಲಕ ವಿಶ್ವದ ನಾನಾ ಭಾಗದಲ್ಲಿದ್ದ ಅನುಯಾಯಿಗಳೊಂದಿಗಿನ ಸಂವಾದದಲ್ಲಿ ಮಾತನಾಡುತ್ತಿದ್ದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸಂವಾದದಲ್ಲಿ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳ 98 ಮಂದಿ ಭಾಗವಹಿಸಿದ್ದರು.
ಅನುಯಾಯಿಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ಇರುವ ಸನ್ನಿವೇಶವು ಅಲ್ಪಾವಧಿಯದ್ದು. ಸೀಮಿತ ಅವಧಿಯ ಕಷ್ಟವನ್ನೇ ಬದುಕಿನ ದೊಡ್ಡ ಸವಾಲು ಎಂದು ಋಣಾತ್ಮಕವಾಗಿ ಚಿಂತನೆ ಮಾಡುವ ಬದಲು ಅವುಗಳನ್ನು ಮೀರಿ ಬೆಳೆಯುವ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ಪರಿಸರ ಋಣಾತ್ಮಕವಾಗಿದ್ದ ವೇಳೆ ನಾವು ಪರಿಸ್ಥಿತಿಯನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳಬೇಕು. ಅದು ಬಿಟ್ಟು ಖಿನ್ನತೆಗೊಳಗಾಗುವುದಲ್ಲ. ಖಿನ್ನತೆಯನ್ನು ಮೀರಿದ ಬದುಕು ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ದಾನ ಮಾಡುವ ದಾನಿಯ ಕೈ ಕಂಪಿಸಿದರೆ ದಾನದ ಪುಣ್ಯ ಪ್ರಾಪ್ತಿಯಾಗುವುದಿಲ್ಲ ಎಂಬಂತೆ ಕರ್ತವ್ಯ ಮಾಡುವ ವೇಳೆ ಕರ್ತವ್ಯದ ಕೈಗಳು ಕಂಪಿಸಬಾರದು. ಪೂರ್ಣ ಪ್ರಮಾಣದಲ್ಲಿ ತೊಡಗಿಸಿ ಕೆಲಸ ಮಾಡಬೇಕು. ಜವಾಬ್ದಾರಿ ಹಾಗೂ ಹೊಣೆಯನ್ನು ಅರಿತು ಕೆಲಸ ಮಾಡಿದರೆ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಉದ್ಯಮ, ವ್ಯವಹಾರದಲ್ಲಿ ನಷ್ಟ ಸಹಜ. ವಿಶ್ವದ ಆರ್ಥಿಕ ಚಟುವಟಿಕೆಯೇ ಸ್ಥಬ್ದಗೊಂಡ ವೇಳೆ ಇಂತಹ ನಷ್ಟ, ಕಷ್ಟಗಳು ಸಹಜ. ದುಡುಕಿನ ತೀರ್ಮಾನಗಳನ್ನು ತೆಗೆದುಕೊಳ್ಳಬಾರದು. ಒಮ್ಮೆ ನಮ್ಮನ್ನು ನಂಬಿದ ಕುಟುಂಬ, ಬದುಕಿನ ಕರ್ತವ್ಯ, ಜವಾಬ್ದಾರಿಯ ಕುರಿತು ಯೋಚಿಸಬೇಕು. ಕಷ್ಟಗಳಿಂದ ಹೊರಬರಲು ಎಲ್ಲರೊಂದಿಗೆ ಕುಳಿತು ಚಿಂತನೆ ನಡೆಸಿ ಹೊರಬರಲು ಪ್ರಯತ್ನಿಸಬೇಕು. ಇಲ್ಲದಿದ್ದರೆ ಹೊಸ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹೊಸ ಹೊಸ ಚಿಂತನೆ – ಯೋಚನೆಯೊಂದಿಗೆ ಬದುಕು ಕಟ್ಟಿಕೊಳ್ಳಲು ಪ್ರಯತ್ನಪಡಬೇಕು. ಹೊಸ ಹೊಸ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪ್ರತಿಯೊಂದು ವೃತ್ತಿಗೂ ಗೌರವ ಇದೆ ಎಂಬುದನ್ನು ಅರಿತು ಬಾಳಬೇಕು ಎಂದು ಸಲಹೆ ನೀಡಿದರು.
ಸಮಾಜದ ನಿರ್ನಾಮ ಮತ್ತು ನಿರ್ಮಾಣ ಎರಡೂ ನಮ್ಮ ಕೈಯಲ್ಲಿದೆ. ನಾವು ಯಾವತ್ತೂ ನಿರ್ಮಾಣಕಾರರಾಗಬೇಕೇ ಹೊರತು ನಿರ್ನಾಮಕಾರರಾಗಬಾರದು. ಪರಿಸ್ಥಿತಿಗೆ ಅನುಗುಣವಾಗಿ ನಮ್ಮಲ್ಲಿ ಬದಲಾವಣೆ ಮಾಡಿಕೊಂಡು ಸುಸ್ಥಿರ ಸಮಾಜ, ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.
ಈ ಬಾರಿಯ ವೆಬಿನಾರ್ನಲ್ಲಿ ಅತಿ ಹೆಚ್ಚು ಮಂದಿ ಮಾನಸಿಕ ಖಿನ್ನತೆಯ ಬಗ್ಗೆಯೇ ಹೆಚ್ಚಿನ ಪ್ರಶ್ನೆಗಳು ಮೂಡಿಬಂದವು. ಇದರಿಂದಾಗಿಯೂ ಮುಂದಿನ ವಾರವೂ ಮಾನಸಿಕ ಖಿನ್ನತೆಯಿಂದ ಪೂರ್ಣ ಪ್ರಮಾಣದಲ್ಲಿ ಹೊರಬರುವ ನಿಟ್ಟಿನಲ್ಲಿ ವೆಬಿನಾರ್ ನಡೆಸಲಾಗುವುದು ಎಂದು ಆಶ್ರಮದ ಪತ್ರಿಕಾ ಕಾರ್ಯದರ್ಶಿ ಶ್ರೀಪುನೀತ್ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.