ಮಂಗಳೂರು: ಮನೆಗೆ ತೆರಳಲು ಅಂಜಿ ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಕಳೆದ ಒಂದೆರಡು ದಿನಗಳಿಂದ ಅಸಹಾಯಕ ಸ್ಥಿತಿಯಲ್ಲಿ ಕಾಲಕಳೆಯುತ್ತಿದ್ದ ಮಹಿಳೆಯನ್ನು ಭಾನುವಾರ ಸಂಜೆ ಸಖಿ ಒನ್ ಸ್ಟಾಪ್ ಸೆಂಟರ್ ಗೆ ದಾಖಲಿಸಿ ಭದ್ರತೆ ಒದಗಿಸಲಾಗಿದೆ.
ಉಪ್ಪೂರಿನ ಜಲಜ ಆಚಾರ್ತಿ (50) ಎಂಬವರು ರಕ್ಷಣೆಗೆ ಒಳಗಾದವರು. ಇವರ ಪತಿ ಕೆಲವು ಸಮಯದ ಹಿಂದೆ ತೀರಿಹೋಗಿದ್ದರು. ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಇವ್ರು ಮನೆಯಲ್ಲಿ ಒಂಟಿಯಾಗಿದ್ದರು. ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸಲು ಹೆದರಿದ ಇವರು ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಆಸರೆ ಪಡೆದಿದ್ದು, ನನಗೆ ಆಸರೆ ಹಾಗೂ ರಕ್ಷಣೆ ಕೊಡಿ ಎಂದು ಅಳಲು ತೋಡಿಕೊಂಡಿದ್ದಾರೆ. ಮಹಿಳೆಯನ್ನು ವಿಚಾರಿಸಿದಾಗ ಆಕೆ ಬ್ರಹ್ಮಾವರ ಠಾಣಾ ವ್ಯಾಪ್ತಿಯವರಾಗಿದ್ದು ಪತಿಯ ಮನೆ ಕುಂಜಾಲು ಎಂಬಲ್ಲಿದೆ ಎಂದು ಗೊತ್ತಾಗಿದೆ. ಈಕೆಯ ಸಂಬಂಧಿಕರು ಸಖಿ ಒನ್ ಸ್ಟಾಪ್ ಸೆಂಟರ್ ಅಥವಾ ಮಹಿಳಾ ಪೊಲೀಸ್ ಠಾಣೆ ಸಂಪರ್ಕಿಸಬಹುದಾಗಿದೆ.