ಮಂಗಳೂರು: ಮನೆ ಮನೆಗಳಲ್ಲಿ ಏಕಕಾಲದಲ್ಲಿ ಬೆಳಗಿದ ಸಾಲು ಸಾಲು ದೀಪ.. ಹಣತೆ ಹಚ್ಚಿ ಕೊರೋನಾದಿಂದ ಮುಕ್ತಿ ನೀಡುವಂತೆ ಪ್ರಾರ್ಥಿಸಿದ ಜನತೆ.. ಏಕತೆಗೆ ಬೆಸುಗೆಯೊಂದಿಗೆ ಭಾವನಾತ್ಮಕ ಸಂದೇಶ ಸಾರಿದ ಪ್ರಣತಿ.. ಪ್ರಧಾನಿ ಮೋದಿ ಕರೆಗೆ ದೊರೆತ ಅಪೂರ್ವ ಸ್ಪಂದನೆ..
ಭಾನುವಾರ ರಾತ್ರಿ ಸಮಯ 9 ಆಗುತ್ತಲೇ ಎಲ್ಲ ಮನೆಗಳ ವಿದ್ಯುತ್ ದೀಪ ಆರಿಸಿ ಹಣತೆಯ ಬೆಳಕು ಪ್ರಜ್ವಲಿಸಿದೆ. ಕೊರೋನಾ ವಿರುದ್ಧದ ದೇಶದ ಸಮರಕ್ಕೆ ಸ್ಥೈರ್ಯ ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಮಂಗಳೂರಿನ ಜನರೂ ದೀಪ ಬೆಳಗಿಸಿ, ಮೇಣದ ಬತ್ತಿ ಉರಿಸಿ, ಟಾರ್ಚ್, ಮೊಬೈಲ್ ಲೈಟ್ಗಳ ಮೂಲಕ ಬೆಳಕು ಪಸರಿಸಿ ಏಕತೆಯ ಮಂತ್ರ ಪಠಿಸಿದ್ದಾರೆ.
ದೀಪ ಹಚ್ಚಲು ಬೆಳಗ್ಗಿನಿಂದಲೇ ಸಿದ್ಧತೆ ಮಾಡಿಕೊಂಡಿದ್ದ ಜನರು ಭಾನುವಾರ ರಾತ್ರಿ 9 ಗಂಟೆ ಆಗುವುದನ್ನೇ ಕಾಯುತ್ತಿದ್ದರು. ಗಂಟೆ 9 ಬಾರಿಸುತ್ತಲೇ 9 ನಿಮಿಷಗಳ ಕಾಲ ದೇಶಕ್ಕಾಗಿ, ದೇಶಕ್ಕೆ ಮಹಾಮಾರಿಯಾಗಿ ಬಂದಿರುವ ಕೊರೋನಾ ಸೋಂಕು ನಾಶಕ್ಕೆ ಮನದಲ್ಲೇ ಪ್ರಾರ್ಥಿಸಿ ದೀಪ ಹಚ್ಚಿದ್ದಾರೆ. ಮನೆಯ ಮಕ್ಕಳು, ಹಿರಿಯರು, ಯುವಕರೆನ್ನದೇ ಎಲ್ಲರೂ ಬಾಲ್ಕನಿ, ಜಗುಲಿ, ಅಂಗಳದಲ್ಲಿ ನಿಂತು ದೀಪ ಬೆಳಗಿದ್ದಾರೆ.