ಹೊಸದಿಗಂತ ಆನ್ ಲೈನ್ ಡೆಸ್ಕ್:
ಕೋತಿಯೊಂದು ಮನೆಯ ಮೇಲ್ಛಾವಣಿ ಕಿತ್ತು ಒಳಗೆ ನುಗ್ಗಿ ಮಲಗಿದ್ದ ಎಂಟು ತಿಂಗಳ ಶಿಶುವನ್ನು ಎತ್ತಿಕೊಂಡು ಹೋಗಿರುವ ವಿಲಕ್ಷಣ ಘಟನೆಯೊಂದು ನಡೆದಿದ್ದು, ಆಘಾತ ಮೂಡಿಸಿದೆ.
ಈ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಭುವನೇಶ್ವರೀ ಎಂಬವರು ತನ್ನ ಮಗುವನ್ನು ಮಲಗಿಸಿ ತಾಯಿ ಹೊರಗೆ ತೆರಳಿದ್ದರು. ಕೆಲವು ಕ್ಷಣಗಳ ಬಳಿಕ ಮಗುವಿನ ಜೋರಾಗಿ ಅಳುವ ಸದ್ದು ಕೇಳಿಸಿ ಧಾವಿಸಿ ಬಂದಾಗ ಕೋತಿ ಮಗುವನ್ನು ಎತ್ತಿಕೊಂಡು ಹೋಗುತ್ತಿರುವುದು ಕಾಣಿಸಿತು.
ಭಯಭೀತರಾದ ಭುವನೇಶ್ವರಿ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡರು. ಸ್ಥಳೀಯರು ಧಾವಿಸಿ ಬಂದು ಕೋತಿಯನ್ನು ಬೆನ್ನಟ್ಟಿದಾಗ ಬೆಚ್ಚಿದ ಕೋತಿ ಮಗುವನ್ನು ಛಾವಣಿಯ ಮೇಲಿನಿಂದ ಎಸೆದು ಬಿಟ್ಟಿದೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗಂಭೀರ ಗಾಯಗೊಂಡಿದ್ದ ಮಗು ಬದುಕುಳಿಯಲಿಲ್ಲ.
ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ವರದಿಯಾಗಿತ್ತು. ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿರುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಆದರೆ ಇದೀಗ ಮಗುವನ್ನು ಹೊತ್ತೊಯ್ದಿರುವುದು ನಾಗರಿಕರಲ್ಲಿ ಭಯಹುಟ್ಟಿಸಿದೆ.