Thursday, July 7, 2022

Latest Posts

ಮರಳು ಅಕ್ರಮ ಸಾಗಾಣಿಕೆ, ಸಂಗ್ರಹಣೆಗೆ ಎತ್ತಿನ ಬಂಡಿ, ಲಾರಿ ಬಳಕೆ: ಬೆಂಬಲ ನೀಡುತ್ತಿರುವ ಅಧಿಕಾರಿಗಳು!

ಹೊಸ ದಿಗಂತ ವರದಿ, ಹಾವೇರಿ:

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಇಷ್ಟು ದಿನ ಟ್ರಕ್, ಟಿಪ್ಪರ್ , ಟ್ರ್ಯಾಕ್ಟರ್ ಸೇರಿದಂತೆ ಇತರೆ ಬೃಹತ್ ವಾಹನಗಳ
ಬಳಕೆ ಮಾತ್ರ ಆಗುತ್ತಿತ್ತು. ಆದರೆ ಈಗ ಎತ್ತಿನ ಚಕ್ಕಡಿ ಹಾಗೂ ಟಾಯರ ಬಂಡಿಗಳು ಬಳಕೆ ಮಾಡುವ ಮೂಲಕ ಕಾನೂನಿನ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಅತ್ಯಂತ ಸುಲಭವಾಗಿ ಕಂಡುಕೊಳ್ಳಲಾಗಿದೆ.
ನದಿಗಳ ಪಕ್ಕದಲ್ಲಿರುವ ಗ್ರಾಮಸ್ಥರು ಮನೆ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳಿಗೆ ಮರಳಿನ ತೊಂದರೆ ಆಗಬಾರದೆಂಬ ಸದುದ್ದೇಶದಿಂದ ಚಕ್ಕಡಿ ಇಲ್ಲವೆ ಎತ್ತಿನ ಟಾಯರ ಬಂಡಿಗಳಲ್ಲಿ ಮರಳನ್ನು ಸಾಗಿಸಿದರೆ ಯಾವುದೇ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ದಾಖಲಿಸುವುದಕ್ಕೆ ವಿನಾಯತಿಯನ್ನು ನೀಡಲಾಗಿದೆ.

ವ್ಯವಸಾಯಕ್ಕೂ ಎತ್ತುಗಳು ಬಾಡಿಗೆ ರೂಪದಲ್ಲಿ ದೊರೆಯದಂತಹ ಸ್ಥಿತಿ ನಿರ್ಮಾಣ
ಹೀಗಾಗಿ ನದಿಗಳ ಅಕ್ಕ ಪಕ್ಕದ ಗ್ರಾಮಸ್ಥರು ಈಗ ಹಗಲು ರಾತ್ರಿ ಎನ್ನದೇ ಎತ್ತಿನ ಚಕ್ಕಡಿ ಹಾಗೂ ಟಾಯರ ಬಂಡಿಗಳಲ್ಲದೆ ಚಿಕ್ಕ ಮಕ್ಕಳೊಂದಿಗೆ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಂಡಗಿಕೊಂಡಿದ್ದಾರೆ. ಇದರಿಂದಾಗಿ ವ್ಯವಸಾಯಕ್ಕೂ ಎತ್ತುಗಳು ಬಾಡಿಗೆ ರೂಪದಲ್ಲಿ ದೊರೆಯದಂತಹ ಸ್ಥಿತಿ ನಿರ್ಮಾಣವಾಗಿದೆ. ರಾತ್ರಿಯಲ್ಲ ಮರಳನ್ನು ಸಾಗಿಸಿರುವುದರಿಂದ ಎತ್ತುಗಳು ದಣಿದುಕೊಂಡಿವೆ ಎಂದು ಹೇಳಿ ರೈತರ ಜಮೀನುಗಳಲ್ಲಿ ಉಳುಮೆ ಮಾಡುವುದಕ್ಕೆ ಇವರಾರೂ ಹೋಗುವುದಿಲ್ಲ.

ಟ್ರಕ್‌ನಲ್ಲಿ ಮರಳು ಅಕ್ರಮ ಸಾಗಿಸುವರಿಗೂ ಕಾನೂನಿನ ತೊಂದರೆ ಆಗದಂತೆ ಮರಳು ದೊರೆಯುತ್ತಿದೆ
ಎತ್ತಿನ 9 ಟಾಯರ ಬಂಡಿಗಳಲ್ಲಿ ಮರಳನ್ನು ತಂದರೆ ಒಂದು ಟ್ರಕ್ ಮರಳಾಗುತ್ತದೆ. ಪ್ರತಿ ಎತ್ತಿನ ಟಾಯರ ಬಂಡಿ ಮರಳಿಗೆ ಒಂದು ಸಾವಿರ ಉಳಿತಾಯವಾಗುತ್ತದೆ. ಹೀಗೆ ಪ್ರತಿ ರಾತ್ರಿ 3-4 ಟಾಯರ ಬಂಡಿ ಮರಳನ್ನು ತರುತ್ತಾರೆ. ಟ್ರಕ್‌ನವರು 15-16ಸಾವಿರ ರೂಗಳನ್ನು ಕೊಟ್ಟು ಮರಳನ್ನು ತಗೆದುಕೊಂಡು ಹೋಗುತ್ತಾರೆ. ಇದರಿಂದ ಟ್ರಕ್‌ನಲ್ಲಿ ಅಕ್ರಮ ಮರಳು ಸಾಗಿಸುವರಿಗೂ ಯಾವುದೇ ಕಾನೂನಿನ ತೊಂದರೆ ಆಗದಂತೆ ಮರಳು ದೊರೆಯುತ್ತಿದೆ.

ನದಿಗಳ ಸುತ್ತಲಿರುವ ಗ್ರಾಮಗಳ ರೈತರು ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದಾರೆ 
ಎತ್ತಿನ ಚಕ್ಕಡಿ ಹಾಗೂ ಟಾಯರ ಬಂಡಿಗಳನ್ನು ಅಕ್ರಮ ಮರಳು ಸಾಗಾಣಿಕೆ ಲಾಭದಾಯಕವಾಗಿ ಕಂಡುಬರುತ್ತಿರುವುದರಿಂದ ನದಿಗಳ ಪಕ್ಕದಲ್ಲಿರುವ ಗ್ರಾಮಗಳಲ್ಲದೆ ಈಗ ನದಿಗಳ ಸುತ್ತಲಿರುವ ಗ್ರಾಮಗಳ ರೈತರು ಹಾಗೂ ಜನತೆ ಈಗ ಎತ್ತುಗಳ ಟಾಯರ ಬಂಡಿಗಳನ್ನು ತಗೆದುಕೊಂಡು ಬಂದು ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ಜಿಲ್ಲಾಡಳಿತ, ಭೂ ಮತ್ತು ಗಣಿ ಇಲಾಖೆ, ಪೊಲೀಸ್ ಇಲಾಖೆ ಮೌನ
ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ, ವರದಾ, ಕುಮದ್ವತಿ ಸೇರಿದಂತೆ ಧರ್ಮಾ ನಾಲ್ಕು ನದಿಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಜಿಲ್ಲಾಡಳಿತ, ಭೂ ಮತ್ತು ಗಣಿ ಇಲಾಖೆ, ಪೊಲೀಸ್ ಇಲಾಖೆ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವಂತೆ ಮೌನವಹಿಸಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

 ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರಳು ಗಣಿಗಾರಿಕೆ
ಜಿಲ್ಲೆಯ ನಾಲ್ಕು ನದಿಗಳ ಪೈಕಿ ಹೆಚ್ಚಾಗಿ ತುಂಗಭದ್ರಾ ಹಾಗೂ ವರದಾ ನನದಿಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಗಲು ರಾತ್ರಿ ಎನ್ನದೇ ಎಗ್ಗಿಲ್ಲದೆ ನಡೆಯುತ್ತಿದೆ. ತುಂಗಭದ್ರಾ ನದಿ ಪಾತ್ರದ ಕಂಚಾರಗಟ್ಟಿ, ಹರಳಳ್ಳಿ, ದಳವಾಯಿಮಟ್ಟಿ, ಚಂದಾಪುರ, ಚಿಕ್ಕಕುರವತ್ತಿ, ಹರನಗಿರಿ, ಈಲದಹಳ್ಳಿ, ಕುದರಿಹಾಳ, ಕೋಣನತಂಬಗಿ, ಹಿರೇಬಿದರಿ ಹಾವನನೂರ, ಹುಳ್ಯಾಳ, ಹಾಂಶಿ, ಶಾಖಾರ,ಚಂದಾಪುರ, ಐರಣಿ, ಗಳಗನಾಥ ಗ್ರಾಮ ಸೇರಿದಂತೆ ಇನ್ನು ಕೆಲ ಗ್ರಾಮಗಳಲ್ಲಿ ಈ ರೀತಿ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ.
ವರದಾ ನದಿ ಪಾತ್ರದಲ್ಲಿಯೂ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ವರದಾ ನದಿಯಲ್ಲಿ ದೊರೆಯುವ ಮರಳಿನಲ್ಲಿ ಮಣ್ಣಿನ ಅಂಶ ಬಹಳ ಇರುವುದರಿಂದ ಅದನ್ನು ಲಾರಿಯಲ್ಲಿ ತಂದು ಅದಕ್ಕೆ ಆಯಿಲ್ ಇಂಜೀನ್ ಬಳಕೆ ಮಾಡಿಕೊಂಡು ನೀರಿನಿಂದ ಸ್ವಚ್ಛಗೊಲಿಸಿ ಆ ನಂತರ ಮರಳನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಜಿಲ್ಲೆಯಲ್ಲಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss