ಹೊಸದಿಗಂತ ವರದಿ, ಶಿವಮೊಗ್ಗ:
ಮರಾಠ ಪ್ರಾಧಿಕಾರ ರಚನೆಯಿಂದ ಕನ್ನಡ ನಾಡಿಗೆ ಯಾವ ರೀತಿ ಅನ್ಯಾಯ ಆಗಲಿದೆ ಎಂಬುದನ್ನು ಹೋರಾಟಗಾರರು ಅಂಕಿ ಅಂಶ ಸಮೇತ ಸ್ಪಷ್ಟವಾಗಿ ತಿಳಿಸಬೇಕು ಎಂದು ಕ್ಷತ್ರಿಯ ಮರಾಠ ಮೀಸಲಾತಿ ಅಭಿಯಾನದ ಅಧ್ಯಕ್ಷ ವಿಜೇಂದ್ರ ಜಾಧವ್ ಆಗ್ರಹಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 50 ವರ್ಷಗಳಿಂದ ಮೈಸೂರು ಬ್ಯಾಂಕ್ ಚೌಕವೇ ಕರ್ನಾಟಕ ಎಂದು ತಿಳಿದಿರುವ ವಾಟಾಳ್ ನಾಗರಾಜ್ ಕೇರಳ-ಮಹಾರಾಷ್ಟ್ರ, ಆಂಧ್ರ ಗಡಿ ಪ್ರದೇಶದಲ್ಲಿ ಕನ್ನಡಿಗರ ಸ್ಥಿತಿ ಗತಿ ಅರಿಯಲು ಯಾವ ರೀತಿ ಪ್ರಯತ್ನಿಸುತ್ತಿದ್ದಾರೆ? ಐದು ವರ್ಷಗಳ ಹಿಂದೆ ಗೋವಾ ತನ್ನ ಗಡಿಯಲ್ಲಿನ ಕನ್ನಡಿಗರನ್ನು ಗಡಿಪಾರು ಮಾಡಿದಾಗ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ದೇಶದ ಐಕ್ಯತೆ ಕಾಪಾಡಿದ ಛತ್ರಪತಿ ಶಿವಾಜಿ ವಂಶಸ್ಥರು ಮರಾಠಿಗರು. ವಿಭಿನ್ನತೆಯಲ್ಲಿ ಏಕತೆ ಸಾಧಿಸಿದ್ದೇವೆ. ನಮ್ಮನ್ನು ನಾಡದ್ರೋಹಿಗಳು ಎಂದು ಕರೆಯಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಸಮಾಜ ಗುರುತಿಸಿದ್ದಾರೆ. ಇದನ್ನು ಸ್ವಾಗತಿಸುತ್ತೇವೆ. ಅಭಿನಂದಿಸುತ್ತೇವೆ. ಇದರ ಜೊತೆಗೆ ಮರಾಠ ಸಮಾಜವನ್ನು 2A ಗೆ ಸೇರಿಸಬೇಕು ಎಂದು ಒತ್ತಾಯಿಸಿದರು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಯಾವತ್ತೂ ಮಹಾರಾಷ್ಟ್ರಕ್ಕೆ ಸೇರುವುದಿಲ್ಲ. ರಾಜಕೀಯ ಕಾರಣದಿಂದ ಅಲ್ಲಿನ ನಾಯಕರು ಹೇಳಿಕೆ ನೀಡುತ್ತಾರೆ. ಇದರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.
ರಮೇಶ್ ಜಾಧವ್, ಭವಾನಿರಾವ್ ಮೋರೆ, ಚೂಡಾಮಣಿ ಪವಾರ್, ದಿನೇಶ್ ಚೌಹಾಣ್ ಸುದ್ದಿಗೋಷ್ಟಿಯಲ್ಲಿದ್ದರು.