ಮಲೆನಾಡಿಗರ‌ ನಿತ್ಯದ  ಗೊಜ್ಜು, ಬಜ್ಜಿ, ತಂಬಳಿ‌ಯಲ್ಲಿದೆ  ಆರ್ಯುವೇದ: ನಿಮ್ಮ ಊಟದಲ್ಲೂ ಜೊತೆಯಾಗಲಿ ಆರೋಗ್ಯ

0
32
ಮಲೆನಾಡಿಗರು ಸಾಂಪ್ರದಾಯಿಕ ಅಡುಗೆಯಲ್ಲಿ ಪ್ರಸಿದ್ಧಿ ಪಡೆದವರು.  ಅದರಲ್ಲೂ ಉತ್ತರಕನ್ನಡದ  ಹವ್ಯಕರ ಅಡುಗೆಗೆ ಕರ್ನಾಟಕದ  ತುಂಬಾ ಹೊಗಳಿಕೆಗಳಿವೆ. ಅವರ  ಪ್ರತಿ ಅಡುಗೆಯಲ್ಲೂ ಆರೋಗ್ಯಕರವಾದ ಉದ್ದೇಶವಿದೆ. ಸೊಪ್ಪು, ಕಾಳು, ಬೇಳೆ, ಮನೆಯಲ್ಲಿಯೇ ಬೆಳೆಯುವ ಸಾವಯವ ತರಕಾರಿಗಳು ಇಂತಹದನ್ನೇ ಬಳಸಿ ಅವರು ಅಡುಗೆ ಮಾಡುವುದು.  ಹಾಗಾದರೆ ಇವರ ಆರೋಗ್ಯಕರ ಅಡುಗೆಗಳು ಯಾವವೆಂದು ಕೇಳುತ್ತೀರ? ಇಲ್ಲಿದೆ ನೋಡಿ..
 ಶುಂಠಿ ತಂಬಳಿ:
ಬೇಕಾಗುವ ಪದಾರ್ಥ: ಶುಂಠಿ, ಎಳ್ಳು, ಉಪ್ಪು, ಒಂದು ಕಪ್ ಮಜ್ಜಿಗೆ, ಒಂದು ಕಪ್ ಕಾಯಿತುರಿ.
ಮಾಡುವ ವಿಧಾನ: ಶುಂಠಿಯನ್ನು ಸಣ್ಣಗೆ ಹೆಚ್ಚಿಕೊಂಡು ಅದನ್ನು ಕಾಯಿ ತುರಿ, ಹಾಗೂ ಹುರಿದ ಎಳ್ಳು, ಉಪ್ಪಿನ ಜತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು ಇದಕ್ಕೆ ಮಜ್ಜಿಗೆ ಸೇರಿಸಿ ಅನ್ನದ ಜೊತೆ ಸೇವಿಸಬಹುದು. ಕುಡಿಯಲೂ ಬಹುದು.
ಶುಂಠಿ ತಂಬಳಿಯನ್ನು ಸೇವಿಸುವುದರಿಂದ ಗ್ಯಾಸ್ ನಿಂದ ಆದ ಹೊಟ್ಟೆನೋವು ಕಡಿಮೆ‌ ಆಗುತ್ತದೆ. ಹಸಿವಾಗುವಂತೆ ಮಾಡುತ್ತದೆ. ಕೆಮ್ಮು, ಕಫ ಆಗದಂತೆ ತಡೆಯುತ್ತದೆ
ಕರಿಬೇವ ಸೊಪ್ಪಿನ ಗೊಜ್ಜು:
ಬೇಕಾಗುವ ಪದಾರ್ಥಗಳು: ಎಳೆ ಕರಿಬೇವು, ಜೀರಿಗೆ,ಎಳ್ಳು,ಇಂಗು ಲಿಂಬು,ಎಣ್ಣೆ ಒಂದು ಕಪ್ ಕಾಯಿತುರಿ, ಉಪ್ಪು
ಮಾಡುವ ವಿಧಾನ: ಎಳೆ ಕರಿಬೇವನ್ನು ಎಣ್ಣೆ, ಜೀರಿಗೆ ಎಳ್ಳಿನ ಜೊತೆ ಚೆನ್ನಾಗಿ ಬಾಡಿಸಿಕೊಳ್ಳಬೇಕು. ಅದನ್ನು ಕಾಯಿ ತುರಿಯೊಂದಿಗೆ ರುಬ್ಬಿಕೊಂಡು, ಅದಕ್ಕೆ ಲಿಂಬು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು, ಬೇಕಿದ್ದರೆ ಸಾಸಿವೆ, ಇಂಗಿನ ಒಗ್ಗರಣೆಯನ್ನೂ ಹಾಕಿ‌ಕೊಳ್ಳಬಹುದು. ಇದನ್ನು ಅನ್ನದ ಜೊತೆ, ದೋಸೆ, ಚಪಾತಿ ಜೊತೆ ಸೇವಿಸಬಹುದು.
ಇದನ್ನು ಸೇವಿಸಿದರೆ ಕಬ್ಬಿಣ ಅಂಶ ಹೆಚ್ಚುತ್ತದೆ, ಕಣ್ಣಿನ ತೊಂದರೆಗಳು ಮಾಯವಾಗುತ್ತದೆ.ಕೂದಲಗೆ ಬೇಕಾದ ಪೋಷಕಾಂಶಗಳನ್ನು‌ ಕೊಡುತ್ತದೆ.
ಬೆಳ್ಳುಳ್ಳಿ ಬಜ್ಜಿ:
ಬೇಕಾಗುವ ಪದಾರ್ಥಗಳು: ಗಟ್ಟಿ ಮೊಸರು, ಬೆಳ್ಳುಳ್ಳಿ, ಸಾಸಿವೆ, ಇಂಗು, ಉಪ್ಪು, ಉದ್ದಿನ ಬೇಳೆ ಒಣಮೆಣಸು, ಎಣ್ಣೆ
ಮಾಡುವ ವಿಧಾನ: ಒಂದು ಗಡ್ಡೆ ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಎಣ್ಣೆ, ಸಾಸಿವೆ, ಇಂಗು, ಉದ್ದಿನ ಬೇಳೆ, ಒಣಮೆಣಸಿನೊಂದಿಗೆ ಹುರಿದುಕೊಳ್ಳಬೇಕು, ನಂತರ ಹುರಿದು ಕೊಂಡ ಮಿಶ್ರಣವನ್ನು ಗಟ್ಟಿ ಮೊಸರಿಗೆ ಹಾಕಿ, ಉಪ್ಪು ಸೇರಿಸಿ ಅನ್ನದ ಜೊತೆ ಸೇವಿಸಬಹುದು.
ಬೆಳ್ಳುಳ್ಳಿ ಬಜ್ಜಿಯನ್ನು ಸೇವಿಸುವುದರಿಂದ ಗ್ಯಾಸ್ ಕಡಿಮೆ ಆಗುತ್ತದೆ. ಮತ್ತು ಸಂಧಿ ನೋವು ಕಡಿಮೆ ಆಗುತ್ತದೆ. ಮಧುಮೇಹ ‌ಬರದಂತೆ ತಡೆಯುತ್ತದೆ.
ನುಗ್ಗಿ ಸೊಪ್ಪಿನ ಪಲ್ಯ:
ಬೇಕಾಗುವ ಪದಾರ್ಥಗಳು: ಎಳೆನುಗ್ಗಿ ಸೊಪ್ಪು ಮೂರು ಕಪ್, ಎಣ್ಣೆ, ಸಾಸಿವೆ, ಇಂಗು, ಅರಿಶಿಣ, ಉಪ್ಪು, ಒಣಮೆಣಸು, ಈರುಳ್ಳಿ, ಕಾಯಿತುರಿ ಸ್ವಲ್ಪ. ಲಿಂಬು
ಮಾಡುವ ವಿಧಾನ: ಎಣ್ಣೆ,ಸಾಸಿವೆ, ಒಣಮೆಣಸು, ಇಂಗು, ಅರಿಶಿಣ ನುಗ್ಗಿ ಸೊಪ್ಪು ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಬೇಕು, ಅದು ಬಾಡಿದ ನಂತರ ಅದಕ್ಕೆ ಈರುಳ್ಳಿ, ಕಾಯಿತುರಿ, ಉಪ್ಪು, ಲಿಂಬು ರಸ ಸೇರಿಸಿ ಪಲ್ಯ ಮಾಡಿಕೊಳ್ಳಬೇಕು, ಇದನ್ನು ಅನ್ನ, ದೋಸೆ, ಚಪಾತಿ, ರೊಟ್ಟಿ ಜೊತೆ ಸೇವಿಸಬಹುದು.
ಇದನ್ನು ಸೇವಿಸುವುದರಿಂದ ಕಾಮಾಲೆ ಬರದಂತೆ ತಡೆಯುತ್ತದೆ, ರಕ್ತ ಹೆಚ್ಚಿಸುತ್ತದೆ. ಮಂಡಿ ನೋವು ಕಡೆಮೆ ಆಗುತ್ತದೆ.
ಸಂಬಾರ ಸೊಪ್ಪಿನ ಚಟ್ನಿ :
ಬೇಕಾಗುವ ಪದಾರ್ಥಗಳು: ಸಂಬಾರ ಸೊಪ್ಪು(ದೊಡ್ಡ ಪತ್ರೆ), ಕಾಳುಮೆಣಸು, ಉಪ್ಪು, ಲಿಂಬು, ಕಾಯಿ ತುರಿ, ಜೀರಿಗೆ ಎಣ್ಣೆ,ಉಪ್ಪು.
ಮಾಡುವ ವಿಧಾನ: ಸಂಬಾರ ಸೊಪ್ಪನ್ನು ಎಣ್ಣೆ ಕಾಳುಮೆಣಸು, ಜೀರಿಗೆಯೊಂದಿಗೆ ಬಾಡಿಸಿಕೊಂಡು‌ ಅದನ್ನು ಕಾಯಿತುರಿಯೊಂದಿಗೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಉಪ್ಪು,  ಲಿಂಬು ಹಾಕಿ ಮಿಶ್ರಣ ಮಾಡಿಕೊಂಡು ಅನ್ನ, ದೋಸೆ ಜೊತೆ ಸೇವಿಸಬಹುದು.‌
ಸಂಬಾರ ಸೊಪ್ಪಿನ ಚಟ್ನಿ ಸೇವಿಸಿದರೆ ಪಿತ್ತ ಕಡಿಮೆ ಆಗುತ್ತದೆ, ಕೆಮ್ಮು, ಕಫ ಆಗುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಲೆನಾಡಿಗರ ಪ್ರತಿ ಅಡುಗೆಯಲ್ಲೂ ಆರೋಗ್ಯಕರ ಔಷಧಿ ಗುಣವಿದೆ. ಇನ್ನೂ ಅನೇಕ ಅಡುಗೆಗಳನ್ನು ಅವರು ಆರೋಗ್ಯಕರ ದೃಷ್ಟಿಯಿಂದ ಮಾಡಿಕೊಳ್ಳುತ್ತಾರೆ. ನೀವು ಇವುಗಳನ್ನೂ ಮಾಡಿಕೊಂಡು ಸೇವಿಸಿ.

LEAVE A REPLY

Please enter your comment!
Please enter your name here