ಶಿವಮೊಗ್ಗ: ಜಿಲ್ಲೆಯಲ್ಲಿ ಸೋಮವಾರದಿಂದ ಮಳೆ ಆರ್ಭಟಿಸತೊಡಗಿದೆ. ಇದರಿಂದಾಗಿ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಳ ಹರಿವಿನ ಪ್ರಮಾಣ ತೀವ್ರ ಹೆಚ್ಚಳವಾಗಿದೆ. ನದೀ ಪಾತ್ರದ ಜನರಿಗೆ ಜಿಲ್ಲಾಡಳಿತ ಎಚ್ಚರವಹಿಸುವಂತೆ ಸೂಚನೆ ನೀಡಿದೆ.
ಸತತ ಮಳೆಯಿಂದಾಗಿ ತುಂಗಾ ನದಿಯ ಒಳ ಹರಿವಿನಲ್ಲಿ ದಿಢೀರ್ ಏರಿಕೆ ಕಂಡಿದೆ. ಸೋಮವಾರ ಬೆಳಿಗ್ಗೆ 11 ಸಾವಿರ ಕ್ಯೂಸೆಕ್ಸ್ ಇದ್ದ ಒಳ ಹರಿವು ಸಂಜೆ ವೇಳೆಗೆ 45 ಸಾವಿರ ಕ್ಯೂಸೆಕ್ಸ್ ಗೆ ಹೆಚ್ಚಾಗಿದೆ. ಹಾಗಾಗಿ ಗಾಜನೂರುನ ತುಂಗಾ ಜಲಾಶಯದಿಂದ 21 ಕ್ರಸ್ಟ್ ಗೇಟುಗಳ ಮೂಲಕ 45,000 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ಇನ್ನು ಸಾಗರ ತಾಲೂಕಿನ ವರದಾ ನದಿ ತುಂಬಿ ಹರಿಯತೊಡಗಿದ್ದು, ಸತತ ಮಳೆ ಮುಂದುವರಿದಲ್ಲಿ ಪ್ರವಾಹ ಉಂಟಾಗುವ ಭೀತಿ ತಲೆದೋರಿದೆ, ಶರಾವತಿ ನದಿಯಲ್ಲಿ ಕೂಡ ಒಳಹರಿವು ಹೆಚ್ಚಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರತೊಡಗಿದೆ.
ಜಿಲ್ಲಾಧಿಕಾರಿ ಸೂಚನೆ…
ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಅಧಿಕಾರಿಗಳು ನೆರೆ ಪರಿಸ್ಥಿತಿ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾರೆ.
ಇನ್ನು ಮಳೆಯ ಜೊತೆಗೆ ರಭಸದಿಂದ ಕೂಡಿದ ಗಾಳಿ ಬೀಸಿದ್ದರಿಂದ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಹಾಗಾಗಿ ಮಲೆನಾಡಿನ ಹಳ್ಳಿಗಳಲ್ಲಿ ವಿದ್ಯುತ್ ಕಡಿತ ಉಂಟಾಗಿ ಕತ್ತಲೆಯಲ್ಲಿ ಮುಳುಗಿವೆ.