Monday, August 15, 2022

Latest Posts

ಮಲೆನಾಡಿನಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಮೈದುಂಬಿಕೊಂಡ ನದಿ, ತೊರೆಗಳು

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ನದಿ, ತೊರೆಗಳು ಮೈದುಂಬಿಕೊಂಡಿವೆ.
ಕಳೆದ ಮೂರು ದಿನಗಳಿಂದ ಆರಂಭಗೊಂಡಿರುವ ಮಳೆ ಸೋಮವಾರ ಸಂಜೆಯಿಂದ ಬಿರುಸುಗೊಂಡಿದ್ದು, ಮಂಗಳವಾರ ಧಾರಾಕಾರವಾಗಿ ಸುರಿಯುತ್ತಿದೆ. ಅಲ್ಲಲ್ಲಿ ಸಣ್ಣ ಪುಟ್ಟ ಭೂಕುಸಿತ ಸಂಭವಿಸಿದ್ದು, ಕೆಲವೆಡೆ ಮರಗಳು ಉರುಳಿ ಬಿದ್ದಿವೆ.
ಮೂಡಿಗೆರೆ, ಶೃಂಗೇರಿ, ಕೊಪ್ಪ ಹಾಗೂ ನ.ರಾ.ಪುರ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗ-ಭದ್ರ, ಹೇಮಾವತಿ ನದಿಗಳು ತುಂಬಿ ಹರಿಯಲಾರಂಭಿಸಿವೆ.
ಚಾರ್ಮಾಡಿಘಾಟಿಯಲ್ಲಿ ಸಣ್ಣ ಪ್ರಮಾಣದ ಗುಡ್ಡ ಕುಸಿದಿದೆ. ಘಾಟಿ ಉದ್ದಕ್ಕೂ ರಸ್ತೆ ಬದಿ ಬೆಟ್ಟದ ಮೇಲಿಂದ ಹತ್ತಾರು ಜಲಪಾತಗಳು ಧುಮ್ಮಿಕ್ಕುತ್ತಿವೆ.
ಕಳೆದ ವರ್ಷ ಆಗಸ್ಟ್ ತಿಂಗಳ 9ರಂದೇ ಮೂಡಿಗೆರೆ ತಾಲ್ಲೂಕಿನ ಕೆಲವು ಪ್ರದೇಶಗಳಲ್ಲಿ ಅತಿವೃಷ್ಟಿಯಿಂದ ಗುಡ್ಡಕುಸಿತದಿಂದ ಮನೆಗಳು, ಕೃಷಿ ಜಮೀನುಗಳು ನಾಶವಾಗಿ ಸಾವು, ನೋವು ಸಂಭಿಸಿತ್ತು. ಈ ಘಟನೆ ಈಗ ಮತ್ತೆ ದುಸ್ವಪ್ನದಂತೆ ಕಾಡಲಾರಂಭಿಸಿದೆ.
ಕೊಟ್ಟಿಗೆಹಾರದಲ್ಲಿ ಹೆಚ್ಚುಮಳೆ
ಸೋಮವಾರ ಬೆಳಿಗ್ಗೆ 8ಗಂಟೆಯಿಂದ ಮಂಗಳವಾರ ಬೆಳಿಗ್ಗೆ 8ರವರೆಗೆ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ 133 ಮಿ.ಮೀ.ಕಳಸ 108, ಹೊಸಕೆರೆ 110 ಬಾಳೂರು 98,ಶೃಂಗೇರಿ ತಾಲ್ಲೂಕಿನ ಕಿಗ್ಗದಲ್ಲಿ 87 ಮಿಲಿಮೀಟರ್ ಅಧಿಕ ಮಳೆಯಾಗಿದೆ.
ಬಯಲಿನಲ್ಲೂ ಉತ್ತಮ ಮಳೆ
ತರೀಕೆರೆ, ಅಜ್ಜಂಪುರ ಮತ್ತು ಕಡೂರು ತಾಲ್ಲೂಕುಗಳಲ್ಲಿ ಆಶ್ಲೇಷ ಮಳೆ ಉತ್ತಮವಾಗಿ ಬರುತ್ತಿರುವುದರಿಂದ ಉದ್ದು, ಮುಸುಕಿನಜೋಳ ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಅನುಕೂಲಕರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss