Wednesday, July 6, 2022

Latest Posts

ಮಲೆನಾಡಿನಲ್ಲಿ ಸ್ಟ್ರಾಬೆರಿ ಹಣ್ಣನ್ನು ಬೆಳೆಸಿ ಸೈಎನಿಸಿಕೊಂಡ ಸಿರಸಿ ತಾಲೂಕಿನ ಹೊಸಳ್ಳಿಯ ಯುವ ಕೃಷಿಕ!

ಮಂಗಳೂರು: ಇಂದು ಎಷ್ಟೋ ಜನ ರೈತರ ಮಕ್ಕಳು ಪ್ರಕೃತಿ ವಿಕೋಪಗಳಿಂದ, ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಹಾಗೂ ದರ ಸಿಗುತ್ತಿಲ್ಲವೆಂದು ಪಟ್ಟಣದ ಕಡೆಗೆ ಮುಖ ಮಾಡಿ ಅಲ್ಲೇ ನೆಲೆಗೊಳ್ಳಲು ನಿಶ್ಚಹಿಸುತ್ತಿರುವ ಕಾಲವಾಗಿದೆ. ಇಂತಹ ಸಮಯದಲ್ಲಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಬೇರೆ ಬೇರೆ ಉದ್ಯೋಗ ಅವಕಾಶಗಳಿದ್ದರೂ ವೈಜ್ಞಾನಿಕವಾಗಿ ಕೃಷಿಯನ್ನು ಮಾಡಬೇಕೆಂಬ ಯುವ ಕೃಷಿಕ ಸುಜಯ ರಾಘವೇಂದ್ರ ಭಟ್ ಅವರ ನಿರ್ಧಾರ ನಿಜಕ್ಕೂ ಮೆಚ್ಚುವಂತಹದು.
ಇವರು ಸಿರಸಿ ತಾಲೂಕಿನ ಹೊಸಳ್ಳಿಯವರು…
ಸುಜಯ ರಾಘವೇಂದ್ರ ಭಟ್ ಇವರು ಸಿರಸಿ ತಾಲೂಕಿನ ಹೊಸಳ್ಳಿಯವರು. ಇವರು ತೋಟಗಾರಿಕಾ ಮಹಾವಿದ್ಯಾಲಯ ಶಿರಸಿಯಲ್ಲಿ ಪದವಿಯನ್ನು ಪಡೆದುಕೊಂಡರು. ನಂತರ ಹಿಮಾಚಲಪ್ರದೇಶದ ಸೋಲನ್ ನಲ್ಲಿರುವ ಡಾ. ಯಶವಂತ ಸಿಂಘ ಪರಮಾರ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದರು. ಅವರು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಾಗ ಹೆಸರಾಂತ ವಿಜ್ಞಾನಿಯವರಾದ ಡಾಕ್ಟರ್.ಕೆ.ಸಿ.ಶರ್ಮಾ ಅವರ ಮಾರ್ಗದರ್ಶನದಲ್ಲಿ ಬಟಾಣಿ ಬೆಳೆಯನ್ನು ಕುಂಟಿತಗೊಳಿಸುವ ಕೀಟವಾದ Chromatomyia horticola  ಬಗ್ಗೆ ಸಂಶೋಧನಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಸ್ನಾತಕೋತ್ತರ ಪದವಿಯಲ್ಲಿ ಓದುತ್ತಿರುವಾಗ ಇವರಿಗೆ ಇಸ್ರೇಲ್ ದೇಶದ ಹೆಬ್ರ್ಯು ವಿಶ್ವವಿದ್ಯಾಲಯ ನಡೆಸುವ 1 ತಿಂಗಳ ಅಂತರಾಷ್ಟ್ರೀಯ ಕೃಷಿ ಕಾರ್ಯಾಗಾರಕ್ಕೆ ಭೇಟಿ ನೀಡುವ ಅವಕಾಶ ದೊರೆಯಿತು.
ಇಸ್ರೇಲ್ ಕೃಷಿಯ ಬಗ್ಗೆ ಅವರು ತಿಳಿದ ಕೆಲವು ವಿಚಾರಗಳು…
ಇಸ್ರೇಲ್‌ನ ಕೃಷಿಕರು ಅತ್ಯಧ್ಭುತ ಡ್ರಿಪ್ ಇರಿಗೇಷನ್ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.ನೆಟಾಫಿಮ್ ಕಂಪನಿಯು ಡ್ರಿಪ್ ಇರಿಗೇಷನ್ ಹಾಗೂ ಮೈಕ್ರೋ ಇರಿಗೆಷನ್‌ಗೇ ಬೇಕಾದ ಗುಣಮಟ್ಟದ ಡ್ರಿರ್‍ಸ್, ಡ್ರಿಪ್ ಲೈನರ್‍ಸ್, ಸ್ಪ್ರಿಕ್ಲರ್‍ಸ್, ಮೈಕ್ರೊ ಎಮಿಟರ್‍ಸ್ ಸಾಮಗ್ರಿಗಳನ್ನು ತಯಾರಿಕೆ ಹಾಗೂ ಪೂರೈಕೆ ಮಾಡುತ್ತದೆ. ಈಗ ಈ ಕಂಪನಿ ಜಗತ್ತಿನಲ್ಲೇ ಇರಿಗೆಷನ್ ಸಾಮಗ್ರಿಗಳಿಗೆ ಹೆಸರುವಾಸಿ ಕಂಪನಿಯಾಗಿದೆ. ಡಿಸ್ಯಾಲಿನೇಷನ್ ಹಾಗೂ ಡೊಮೆಸ್ಟಿಕ್ ಕೆಲಸಗಳಿಗೆ ಬಳಸಿದ ನೀರನ್ನು ರೀಸೈಕಲ್ ಮಾಡಿ ಕೃಷಿಗೆ ಉಪಯೋಗಿಸುತ್ತಾರೆ. ಇಸ್ರೇಲ್‌ನಲ್ಲಿ ಕಿಬೂತ್ ಎನ್ನುವ ಸಮುದಾಯ ಒಟ್ಟುಗೂಡಿ ಸಾಮೂಹಿಕ ಕೃಷಿಯನ್ನು ಮಾಡುತ್ತಾರೆ. ಅಲ್ಲಿಯ ಜನರು ಮುಖ್ಯವಾಗಿ ಪ್ರೀಸಿಷನ್ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.ತಾಜಾ ನೀರಿನ ಮೂಲಗಳಿಲ್ಲದಿದ್ದರೂ ಈ ರೀತಿಯ ವೈಜ್ಞಾನಿಕ ಕೃಷಿಯನ್ನು ಅನುಸರಿಸುತ್ತಿರುವದು ಅವರ ಜಾಣ್ಮೆಯ ನಡೆಯಾಗಿದೆ.ಸಸ್ಯಗಳ ಅಂಗಾಂಶಗಳ ಪರೀಕ್ಷೆ,ಮಣ್ಣಿನ ಪರೀಕ್ಷೆಗಳನ್ನು ಮಾಡಿಸುವದರ ಮೂಲಕ ಬೆಳೆಯ ಇಳುವರಿ ಹಾಗೂ ಗುಣಮಟ್ಟಕ್ಕೆ ಕಾರಣಗಳನ್ನು ಕಂಡುಕೊಳ್ಳುತ್ತಾರೆ.ಅಲ್ಲಿ ಕೃಷಿ ಭೂಮಿಯ ವಾತಾವರಣದ ಮಾಹಿತಿಗಳನ್ನು ಸೆನ್ಸರ್‌ಗಳ ಮೂಲಕ ಸಂಗ್ರಹಿಸಿ ಕ್ರೋಢಿಕರಿಸಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಸಿಗುವಂತೆ ಮಾಡಲಾಗುತ್ತದೆ.ಗಾಳಿಯಲ್ಲಿರುವ ನೀರನ್ನು ಸಂಗ್ರಹಿಸಿ ಬೆಳೆಗಳಿಗೆ ಉಪಯೋಗಿಸುವ ವಿನೂತನ ತಂತ್ರಜ್ಞಾನಗಳೂ ಇಸ್ರೇಲ್‌ನಲ್ಲಿ ಇವೆ ಎಂದು ಸುಜಯ ಅವರು ಹೇಳುತ್ತಾರೆ.

ಇವರ ತಂದೆ ಕೂಡ ಪ್ರಯೋಗಶೀಲ ಕೃಷಿಕರು…
ಇವರ ತಂದೆ ರಾಘವೇಂದ್ರ ಭಟ್ ಕೂಡ ಪ್ರಯೋಗಶೀಲ ಕೃಷಿಕರು. ಉತ್ತರಕನ್ನಡ ಜಿಲ್ಲೆಯಲ್ಲಿ ೨೦೦೦ ವರ್ಷದಲ್ಲಿ ಪಪ್ಪಾಯವನ್ನು ಬೆಳೆಯಾಗಿ ಪರಿಚಯಿಸಿದವರಲ್ಲಿ ಇವರು ಮೊದಲಿಗರು.ಇವರು 2004 ವರ್ಷದಲ್ಲಿ ವೆನಿಲ್ಲಾ ಬೆಳೆಯನ್ನು ಅತ್ಯಧಿಕವಾಗಿ ಪ್ರೊಸೆಸ್ಸಿಂಗ್ ಮಾಡುವದರಲ್ಲಿ ರಾಜ್ಯದಲ್ಲೇ ಮೇಲುಗೈನ್ನು ಸಾಧಿಸಿದ್ದರು.೨೦೦೮ ರಲ್ಲಿ ಸೋಲಾರ್ ಟನೆಲ್ ಡ್ರೈಯರ್‌ನ್ನು ಆವಿಷ್ಕರಿಸಿದ್ದರು. ಆರ್ ಆಂಡ್ ವಿ ಟೆಕ್ನೋಲಾಜಿಸ್ ಕಂಪನಿಯನ್ನು 2005 ರಲ್ಲಿ ಸ್ಥಾಪಿಸಿ ಸೋಲಾರ್ ಟನೆಲ್ ಡ್ರೈಯರ್ ಹಾಗೂ ಪಾಲಿಹೌಸ್ ತಯಾರಿಕೆ ಹಾಗೂ ಪೂರೈಕೆಗಳಿಂದ ಹಲವಾರು ರೈತರು ಇವುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮಾಡಿದ್ದಾರೆ. ಸುಜಯ್ ಅವರಿಗೆ ಅವರ ತಂದೆಯೇ ಪ್ರೇರಣೆ. ಅಡಿಕೆ ,ತೆಂಗು , ಬಾಳೆ ಬೆಳೆಯುವದರೊಂದಿಗೆ ಇವರು ಕಳೆದ 1 ವರ್ಷದಿಂದ ಮಲೆನಾಡಿನಲ್ಲಿ ಅಪರೂಪದ ಸ್ಟ್ರಾಬೆರಿ ಬೆಳೆಯನ್ನು ಬೆಳೆಯುತ್ತಿದ್ದಾರೆ.ಸಾವಯವ ಕೃಷಿಯೊಂದಿಗೆ ವೈಜ್ಞಾನಿಕವಾಗಿ ಕೃಷಿಯನ್ನು ಮಾಡುತ್ತಿದ್ದಾರೆ. ಪ್ರತಿ ವರ್ಷ ಮಣ್ಣಿನ ಪರೀಕ್ಷೆ ಮಾಡಿಸಿ ಮಣ್ಣಿನ ಗುಣಮಟ್ಟವನ್ನು ಹೆಚ್ಚಿಸಲು ಬೇಕಾದ ಪೋಷಕಾಂಶಗಳನ್ನು ಕೊಡುತ್ತಾರೆ. ವಿಟಮಿನ್ ಸಿ ಹೇರಳವಿರುವ ಸ್ಟ್ರಾಬೆರಿಯನ್ನು ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ಬೆಳೆಸುತ್ತಾರೆ.ಇತ್ತೀಚೆಗೆ ಕೆಲವು ವರ್ಷಗಳಿಂದ ಮಹಾರಾಷ್ಟ್ರಾ , ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬೆಳೆಸುತ್ತಿದ್ದಾರೆ. ಸುಜಯ ಅವರು ಹೊಸ ಬೆಳೆಯನ್ನು ಬೆಳೆಯಬೇಕೆಂದು ಹಲವು ಕೃಷಿ ತಜ್ಷರ ಮಾಹಿತಿ ಪಡೆದಾಗ ಇವರಿಗೆ ಸ್ಟ್ರಾಬೆರಿ ಹಣ್ಣು ಕುತೂಹಲ ಮೂಡಿಸಿತು. ಕೃಷಿ ತಜ್ಷg ಹಾಗೂ ಅನುಭವಸ್ಥರ ಮಾಹಿತಿಯಿಂದ ಕಳೆದ 1 ವರ್ಷದಿಂದ ಅಪರೂದ ಸ್ವೀಟ್ ಚಾರ್‍ಲೀ ವಿಧದ ಸ್ಟ್ರಾಬೆರಿ ಹಣ್ಣನ್ನು ಬೆಳೆಯುತ್ತಿದ್ದಾರೆ. ಕಳೆದ ವರ್ಷ ಪಾಲಿತೀನ್ ಹೌಸ್ ಮಾಡಿ ಸುಮಾರು 2500 ಸ್ಟ್ರಾಬೆರಿ ಸಸ್ಯಗಳನ್ನು ಅಗಸ್ಟ್ ತಿಂಗಳಿನಲ್ಲಿ ನಾಟಿ ಮಾಡಿದ್ದರು.ಯಾವಾಗಲೂ ಸ್ಟ್ರಾಬೆರಿ ನಾಟಿ ಮಾಡಲು ಅಗಸ್ಟ್ ತಿಂಗಳು ಸೂಕ್ತ. ಕಳೆ, ಕೀಟಗಳಿಂದ ಬೆಳೆಗಳನ್ನು ಸಂರಕ್ಷಿಸಲು ಪ್ಲಾಸ್ಟಿಕ್‌ನ ಹೊದಿಕೆಯನ್ನು ಹೊದಿಸಿ ಸಣ್ಣ ಸಣ್ಣ ರಂಧ್ರಗಳನ್ನು ಮಾಡಿ ಗಿಡಗಳನ್ನು ನಾಟಿ ಮಾಡಿದ್ದಾರೆ. ನಂತರ ಆ ಸಸ್ಯಗಳು ಅಕ್ಟೋಬರ್ ನಲ್ಲಿ ಅವು ಹೂ ಬಿಡಲು ಆರಂಭಿಸುತ್ತವೆ.ಈ ಹಣ್ಣುಗಳಿಗೆ ಅತ್ಯಂತ ಕಡಿಮೆ ನೀರು ಸಾಕಾಗುತ್ತದೆ. ಸುಜಯ ಅವರು 19.19.19 (ಎನ್.ಪಿ.ಕೆ) ಗೊಬ್ಬರವನ್ನು ಪ್ರತಿ ಗಿಡಕ್ಕೆ ೨ಗ್ರಾಮ್ ನಂತೆ ವಾರಕ್ಕೆ 2 ಸಲ ಕೊಡುತ್ತಿದ್ದಾರೆ. ಹಾಗೆಯೆ ಹಣ್ಣುಗಳ ಗಾತ್ರ ಹೆಚ್ಚಿಸಲು ಗಿಬ್ಬೆರ್‍ಲಿಕ್ ಆಮ್ಲವನ್ನು ಸಿಂಪಡಿಸುತ್ತಾರೆ. ಸಾವಯವ ಕೃಷಿಯೊಂದಿಗೆ ವೈಜ್ಞಾನಿಕವಾಗಿ ಕೃಷಿ ಮಾಡುವದು ಉತ್ತಮ ಎನ್ನುವದು ಅವರ ಅಭಿಪ್ರಾಯ. ಸಪ್ಟೆಂಬರ್ ನಿಂದ ಮಾರ್ಚತನಕ ವಾರಕ್ಕೆ ೨ ಸಲ ಕೊಯ್ಲು ಮಾಡಬಹುದು ಎಂದು ಹೇಳುತ್ತಾರೆ.ಅವರಿಗೆ ಕಳೆದ ವರ್ಷ 2500 ಗಿಡಗಳಿಂದ ವಾರಕ್ಕೆ ಸುಮಾರು 15-20 ಕೆಜಿ ಬೆಳೆ ದೊರೆಯುತ್ತಿದೆ. ಈಗ ಸಧ್ಯದ ಮಟ್ಟಿಗೆ ಸಿರಸಿಯ ಲೋಕಲ್ ಜನರು ಹಾಗೂ ಅಲ್ಲಿಯ ಒಂದು ಹೋಮಿಯೋಪತಿ ಆಸ್ಪತ್ರೆಯು ಅವರು ಬೆಳೆದ ಹಣ್ಣುಗಳ ಗ್ರಾಹಕರಾಗಿದ್ದಾರೆ.

ಈ ಹಣ್ಣು ಒಂದು ದಿನ ಮಾತ್ರ ಚೆನ್ನಾಗಿ ಇರುತ್ತದೆ…
ಈ ಹಣ್ಣು ಒಂದು ದಿನ ಮಾತ್ರ ಚೆನ್ನಾಗಿ ಇರುತ್ತದೆ. ಮರುದಿನಕ್ಕೆ ಕೊಳೆತು ಹೋಗುತ್ತದೆ. ಇದರಿಂದ ಲೋಕಲ್ ನಲ್ಲಿ ಮಾರುಕಟ್ಟೆಗಳನ್ನು ಕಂಡುಕೊಳ್ಳುವದು ಉತ್ತಮ ಎಂದು ಹೇಳುತ್ತಾರೆ. ತುಂಬ ದೂರ ಸಾಗಾಣಿಕೆ ಮಾಡುವದರಿಂದ ಹಣ್ಣುಗಳು ಕೊಳೆತು ಹೋಗುವ ಪರಿಸ್ಥಿತಿ ಇರುತ್ತದೆ ಎಂದು ಅವರ ಅನುಭವವನ್ನು ಹೇಳಿದ್ದಾರೆ. ಮಾರುಕಟ್ಟೆ ದೊರೆತರೆ ಈ ಬೆಳೆಯಿಂದ ಲಾಭಕ್ಕೆ ಕೊರತೆ ಇಲ್ಲ ಎಂದು ಅವರು ಹೇಳುತ್ತಾರೆ. ಸ್ಟ್ರಾಬೆರಿಯಲ್ಲಿ ಪ್ರತಿ ತಿಂಗಳು ರನ್ನರ್ (ಮರಿ ಸಸ್ಯಗಳು ಹುಟ್ಟುತ್ತವೆ) ಅವುಗಳನ್ನು ಪ್ರತಿ ತಿಂಗಳು ತೆಗೆಯುತ್ತಿರಬೇಕು. ಎಪ್ರಿಲ್ ,ಮೇ ನಲ್ಲಿ ಹುಟ್ಟಿದ ಸಸ್ಯಗಳನ್ನು ಮುಂದಿನ ಬೆಳೆಗೆ ನಾಟಿ ಮಾಡಲು ಉಪಯೋಗವಾಗುತ್ತದೆ. ಇದಲ್ಲದೇ ಇವರು ಹಿಂದಿನ ವರ್ಷಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡಿದ್ದಾರೆ. ಇವರಿಗೆ ಬೋನ್ಸೈ ಕಲೆಯಲ್ಲಿ ಹಾಗೂ ಅರ್ಕಿಡ್ ಹೂವಿನ ಸಸ್ಯಗಳ ಸಂಗ್ರವಿಕೆಯಲ್ಲಿಯೂ ವಿಶೇಷ ಆಸಕ್ತಿ ಇದೆ. ಅವರು ಪದವಿ ಪೂರ್ವದಲ್ಲಿ ಆಭ್ಯಾಸ ಮಾಡುತ್ತಿರುವಾಗಲೇ ಬೋನ್ಸೈ ಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದರು.ಪದವಿಯನ್ನು ಪಡೆಯುತ್ತಿರುವಾಗ ಬೋನ್ಸೈ ವಿಧಾನದ ಕೆಲವು ಪುಸ್ತಕಗಳ ಓದಿ ತಿಳಿದುಕೊಂಡು ಸುಮಾರೂ 30 ಹೆಚ್ಚು ಸಸ್ಯಗಳನ್ನು ಬೋನ್ಸೈ ವಿಧಾನದಲ್ಲಿ ಬೆಳೆಸಿದರು. ಅವುಗಳಲ್ಲಿ ಅಶ್ವತ್ಥ,ಆಲ, ಹುಣಸೆ, ಲಿಂಬೆ, ಚಿಕ್ಕು ಪ್ರಮುಖಗಳು.
ಬೋನ್ಸೈ ವಿಧಾನದಿಂದ ಬೃಹದಾಕಾರವಾಗಿ ಬೆಳೆಯುವ ಮರಗಳನ್ನು ಚಿಕ್ಕ ಚಿಕ್ಕ ಕುಂಡಗಳಲ್ಲಿ ಅಲಂಕಾರಿಕವಾಗಿ ಬೆಳೆಸಬಹುದಾಗಿದೆ .ಈ ಕಲೆ ಚೀನಾದಲ್ಲಿ ಪ್ರಾರಂಭವಾದರೂ ಅದನ್ನು ಜಪಾನಿಯರು ಅಭಿವೃದ್ಧಿ ಪಡಿಸಿದರು. ಹಾಗೇ ಈ ಕಲೆ ಬೇರೆ ಬೇರೆ ದೇಶಗಳಲ್ಲಿ ಪ್ರಶಲಿತಗೊಂಡಿತು. ಪ್ರತಿ 2 ತಿಂಗಳಿಗೊಮ್ಮೆ ಬೋನ್ಸೈ ಗಿಡಗಳನ್ನು ಪ್ರುನಿಂಗ್ ಮಾಡುತ್ತಿರಬೇಕು.ಹೀಗೆ ಮಾಡುವದರಿಂದ ಅವು ಕುಬ್ಜವಾಗಿ ಬೆಳೆಯಲು ಸಾಧ್ಯವಾಗುತ್ತದೆ.ಆರಂಭದಲ್ಲಿ ಅವುಗಳಿಗೆ ವೈರಿಂಗ್ ಮಾಡುವದರಿಂದ ಅವುಗಳಿಗೆ ಆಕಾರವನ್ನು ಕೊಡಲು ಸಾಧ್ಯವಾಗುತ್ತದೆ ಎಂದು ಸುಜಯ ಅವರು ಹೇಳುತ್ತಾರೆ.
ಸಸ್ಯಗಳ ಕಸಿಯನ್ನು ಮಾಡುವದರಲ್ಲಿ ಅನುಭವ
ಇದಲ್ಲದೇ ಸುಜಯ ಅವರು ಸಸ್ಯಗಳ ಕಸಿಯನ್ನು ಮಾಡುವದರಲ್ಲಿ ಅನುಭವವನ್ನು ಹೊಂದಿದ್ದಾರೆ.ಕಸಿ ಅಥವಾ ಗ್ರಾಪ್ಟಿಂಗ್ ಮಾಡುವದರಿಂದ ಗಿಡಗಳ ಹಾಳಾದ ಭಾಗಗಳನ್ನು ಸರಿಪಡಿಸಬಹುದು. ಈ ವಿದಾನದಲ್ಲಿ 2-3 ಗಿಡಗಳ ಭಾಗಗಳನ್ನು ಒಟ್ಟಿಗೆ ಜೋಡಿಸಿ ಅವು ಒಂದೇ ಗಿಡದಲ್ಲಿ ಬೆಳೆಯುವಂತೆ ಮಾಡಲಾಗುತ್ತದೆ. ಇದರಿಂದ ಗಿಡಗಳಿಗೆ ರೋಗನಿರೋದಕ ಶಕ್ತಿಯು ಸಿಗಲ್ಪಡುತ್ತದೆ ಹಾಗೂ ಹೂ ಬಿಡುವ ಸಮಯವನ್ನು ಕಡಿಮೆ ಮಾಡಬಹುದು,ಹಣ್ಣುಗಳ ಕೊಯ್ಲು ಸರಾಗವಾಗಲು ಗಿಡಗಳನ್ನು ಕುಬ್ಜವಾಗಿ ಬೆಳೆಯುವಂತೆ ಮಾಡಬಹುದು ಎಂದು ಸುಜಯ ಅವರು ಹೇಳುತ್ತಾರೆ. ಇವರಲ್ಲಿ 100 ಕ್ಕೂ ಹೆಚ್ಚೂ ಕ್ಯಾಟ್ಸ್ ಟೇಲ್ ಆರ್ಕಿಡ್ ,ಪೋಕ್ಷ್ ಟೇಲ್ ಆರ್ಕಿಡ್ ಹೀಗೆ ವಿಧ, ವಿಧದ ಹೂವಿನ ಗಿಡಗಳ ಸಂಗ್ರಹವಿದೆ.ಆರ್ಕಿಡ್ ನಲ್ಲಿ ಸುಮಾರು 22000 ಕ್ಕೂ ಹೆಚ್ಚೂ ಪ್ರಭೇಧಗಳಿವೆ. ಇವು ಅಂಟಾರ್‍ಟಿಕಾದಲ್ಲಿ ಬಿಟ್ಟು ಬೇರೆ ಬೇರೆ ದೇಶಗಳಲ್ಲಿ ಕಾಣಸಿಗುತ್ತದೆ.ಸುಜಯ ಅವರು ಪದವಿಯಲ್ಲಿರುವಾಗಲೇ . ಆರ್ಕಿಡ್ ಹೂವುಗಳ ಕೃಷಿಯನ್ನು ಸಿರಸಿಯೊಬ್ಬರಿಗೆ ಮಾಡಿಕೊಟ್ಟಿದ್ದರು.
ಇವರು ತಮ್ಮ ತೋಟದ ನೀರಾವರಿಗೆ ಇಸ್ರೇಲ್ ಮಾದರಿಯನ್ನು ಅಳವಡಿಸಿಕೊಂಡಿದ್ದಾರೆ ಇವರ ಕೃಷಿ ಭೂಮಿಯಲ್ಲಿ ಸುಮಾರು ಅರ್ಧ ಎಕರ್ ಅಷ್ಟು ವಿಸ್ತೀರ್ಣದ ಇಂಗು ಗುಂಡಿಯನ್ನು ತೋಡಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಅವರ ಕೃಷಿ ಭೂಮಿಯ ಸುತ್ತಲೂ ಇರುವ ಕಾಡಿನಲ್ಲಿ ಹರಿಯುವ ನೀರು ಈ ಇಂಗುಗುಂಡಿಗೆ ಬಂದು ಸೇರುತ್ತದೆ. ಈ ತರಹದ ಮಳೆ ಇಂಗಿಸುವಿಕೆ ಪದ್ಧತಿಯಿಂದ ಅವರ ಕೃಷಿ ಭೂಮಿಯ ಬೊರ್‌ವೆಲ್ ಗಳು ಪುನರ್ಭರ್ತಿ ಆಗುತ್ತಿದೆ ಎಂದು ಹೇಳುತ್ತಾರೆ. ಅದೇ ರೀತಿ ಅವರ ಕೃಷಿಭೂಮಿಯಲ್ಲಿ ಮಳೆ ನೀರನ್ನು ಶೇಖರಿಸುವ ಹೊಂಡ ಕೂಡ ಇದೆ.ಈ ವಿಧಾನಗಳಿಂದ ಅವರು ನೀರಿನ ಶೇಖರಣಾ ಘಟಕವನ್ನು ವಿಸ್ತರಿಸಿ ನೀರಿನ ಜೀವಸೆಲೆಯನ್ನು ಕಂಡುಕೊಂಡಿದ್ದಾರೆ. ಇವರು ನೀರಾವರಿಗೆ ಇನಲೈನ್ ಡ್ರಿಪ್ಪರ್ ಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಪದ್ಧತಿಯಲ್ಲಿ ಕೃಷಿ ಭೂಮಿಗೆ ನೀರಾವರಿ ಮಾಡುವಾಗ ಕೃಷಿಭೂಮಿಯ ಎಲ್ಲಿ ಭಾಗಗಳಿಗೂ ಒಂದೇ ಸಮಯದಲ್ಲಿ ನೀರು ಸರಬರಾಜು ಆಗುತ್ತದೆ.ಅತಿ ನೀರಾವರಿಗಿಂತ ಆಗಾಗ್ಗೆ ಬೆಳಿಗ್ಗೆ , ಮಧ್ಯಾಹ್ನ ಅರ್ಧ ಗಂಟೆ ಗಿಡಗಳಿಗೆ ಅಗತ್ಯವಿದ್ದಷ್ಟು ನೀರನ್ನು ಕೊಡುತ್ತಿದ್ದಾರೆ. ನೀರಿನೊಟ್ಟಿಗೆ ಗೊಬ್ಬರವನ್ನು ಸೇರಿಸಿ ಕೊಡುತ್ತಾರೆ. ಇವರ ಕೃಷಿ ಭೂಮಿಯ ವಿವಿಧ ಭಾಗಗಳಲ್ಲಿ ಇಂಜೆಕ್ಟ್ ಪಾಯಿಂಟ್ ಗಳಿವೆ. ಈ ಇಂಜೆಕ್ಟ್ ಪಾಯಿಂಟ್ ಗಳಲ್ಲಿ ಆಹಾ ಕೃಷಿಯ ಭಾಗಗಳಿಗೆ ಬೇಕಾದ ಗೊಬ್ಬರವನ್ನು ಕೊಡಲಾಗುತ್ತದೆ. ಹೀಗೆ ಬೇರೆ ಬೇರೆ ಕೃಷಿ ಭಾಗಗಳಿಗೆ ಒಂದೇ ಸಮಯದಲ್ಲಿ ನೀರು , ಗೊಬ್ಬರದೊಟ್ಟಿಗೆ ಎಷ್ಟು ನೀರು ಬೇಕೊ ಅಷ್ಟೇ ಸರಬರಾಜು ಆಗುತ್ತದೆ.ಈ ವಿಧಾನಕ್ಕೆ ಪರ್ಟಿಗೇಟನ್ ಎಂದು ಹೇಳುತ್ತಾರೆ.ಇದರಿಂದ ಸಮಯವು ಉಳಿತಾಯ , ಮಿತವ್ಯಯವು, ಕೂಡ ಎನ್ನುತ್ತಾರೆ.೧೧ ಎಕರ್ ವಿಸ್ತೀರ್ಣದ ಇವರ ಜಮೀನಿನಲ್ಲಿ ಅಡಿಕೆ,ತೆಂಗು,ಬಾಳೆ,ಸ್ಟ್ರಾಬೆರಿ ಜೊತೆ ಹಲವಾರು ಇತರೆ ಹಣ್ಣುಗಳಾದ ಸೀತಾಫಲ, ಪೇರಲೆ, ಕೊಡುಗಿನ ಕಿತ್ತಳೆ, ಚಟ್ಟಳ್ಳಿ ಪಾರ್ಮನ ಮಾಡಹಾಗಲಕಾಯಿ ,ಮುರುಗಲು,ಜಾಯಿಕಾಯಿ ಗಿಡಗಳನ್ನು ತಮ್ಮ ಕೃಷಿ ಭೂಮಿಯಲ್ಲಿ ಬೆಳೆಸುತ್ತಿದ್ದಾರೆ.ಇವರು ಹಿರಿಯರಿಂದ ತಿಳಿದ ಹಳ್ಳಿ ಔಷಧಿಯನ್ನು ಕಿಡ್ನಿ ಸ್ಟೋನ್ ಆದವರಿಗೆ ಕೊಡುತ್ತಾರೆ.ಇದಲ್ಲದೇ ಇವರಲ್ಲಿ ಬಲೂ ಅಪರೂಪವಾದ ಬಿಳಿ ಅಲೋವೆರಾ ಕೂಡ ಇದೆ.ಹಾಗೆಯೇ ಇವರು ಹಲವಾರು ಕೃಷಿ ಕಾರ್ಯಕ್ರಮಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾಥಿಗಳಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.ರೈತರು ಬೆಳೆದ ಬೆಳೆಗಳಿಗೆ ಅನುಕೂಲವಾದ ಮಾರುಕಟ್ಟೆ ಸಿಗಬೇಕು. ಹೊಪ್‌ಕಾಮ್ಸ್ ಂತಹ ಮಾರುಕಟ್ಟೆಯ ಘಟಕಗಳು ರೈತರು ಬೆಳೆದ ಎಲ್ಲ ಬೆಳೆಗಳನ್ನು ಸ್ವೀಕರಿಸುವಂತಾದರೆ ರೈತರ ಬೆಳೆಗೆ ಒಳ್ಳೆಯ ಮಾರುಕಟ್ಟೆ ಹಾಗೂ ಒಳ್ಳೆ ಕ್ರಯವು ಸಿಗುತ್ತದೆ ಎನ್ನುತ್ತಾರೆ.ಪ್ರಾಥಮಿಕ ಹಾಗೂ ಪ್ರೌಢsಶಾಲಾ ವಿದ್ಯಾರ್ಥಿಗಳಿಗೆ ಕೃಷಿಯ ಕುರಿತು ಒಂದು ವಿಷಯ ಹಾಗೂ ಕಾರ್ಯಾಗಾರಗಳಿದ್ದರೆ ಮಕ್ಕಳಲ್ಲಿ ಕೃಷಿಯ ತಿಳುವಳಿಕೆಯನ್ನು ಹಾಗೂ ಆಸಕ್ತಿಯನ್ನು ಹೆಚ್ಚಿಸಬಹುದು ಎನ್ನುವದು ಯುವಕೃಷಿಕರಾಧ ಸುಜಯ ಅವರ ಅವರ ಸಲಹೆಯಾಗಿದೆ.
ಬಲು ಅಪರೂಪವಾದ ಸ್ಟ್ರಾಬೆರಿಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಮೊದಲಬಾರಿಗೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.
ಕೃಷಿಯಲ್ಲಿ ಸಾಧನೆ ಮಾಡಬೇಕು,ಹೊಸ ಹೊಸ ಪ್ರಯೋಗಗಳೊಂದಿಗೆ ಹೊಸ ಹೊಸ ಬೆಳೆಗಳನ್ನು ಬೆಳೆಯಬೇಕು ಎಂಬ ಆಲೋಚನೆ ಇರುವ ಸುಜಯ ಅವರು ಇಂದಿನ ಯುವಜನತೆಯಲ್ಲಿ ವಿಶಿಷ್ಟರಾಗಿದ್ದಾರೆ.

ಮಧುರಾ ಕೂಡಗಟ್ಟಿಗೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss