Monday, August 8, 2022

Latest Posts

ಮಳೆಯಾರ್ಭಟಕ್ಕೆ 853 ಮನೆಗಳಿಗೆ ಹಾನಿ: ದ.ಕ ಜಿಲ್ಲೆಯಲ್ಲಿ 103 ಹೆಕ್ಟೇರ್ ಬೆಳೆ ನಾಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಸಾಕಷ್ಟು ಹಾನಿಯೂ ಸಂಭವಿಸುತ್ತಿದೆ. ಜಿಲ್ಲೆಯಲ್ಲಿ ಏ.1ರಿಂದ ಆ.10ರವರೆಗೆ ಒಟ್ಟು ೮೫೩ ಮನೆಗಳಿಗೆ ಹಾನಿಯುಂಟಾಗಿದ್ದು, ಕೋಟ್ಯಾಂತರ ರೂ.ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಇದುವರೆಗೆ 34 ಮನೆಗಳು ಸಂಪೂರ್ಣ ನಾಶ ಹೊಂದಿದ್ದು,804 ಮನೆಗಳು ಭಾಗಶ ಹಾನಿಗೊಂಡಿವೆ. ಕಳೆದ 24ಗಂಟೆಗಳ ಅಂತರದಲ್ಲಿ ೫ ಮನೆ ಸಂಪೂರ್ಣ ನಾಶವಾಗಿದ್ದು, 20 ಮನೆಗಳು ಭಾಗಶಃ ಹಾನಿಗೊಂಡಿವೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳಲ್ಲೂ ನೀರಿನ ಪ್ರಮಾಣ ಭಾರೀ ಹೆಚ್ಚಾಗಿದೆ.

ನೇತ್ರಾವತಿ, ಕುಮಾರಾಧಾರ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹ ಹೆಚ್ಚಾಗಿರುವುದರಿಂದ ನೀರು ತೋಟ, ಭತ್ತದ ಗದ್ದೆಗಳು ಸೇರಿದಂತೆ ಮನೆಗಳಿಗೂ ನುಗ್ಗುತ್ತಿದ್ದು, ಜನತೆ ಭಯಭೀತಿಯಿಂದ ದಿನಕಳೆಯುವಂತಾಗಿದೆ.
ಕಡಬ 12 ಮನೆಗಳು, ಮಂಗಳೂರು 9, ಬಂಟ್ವಾಳ 4, ಬೆಳ್ತಂಗಡಿ 4, ಮೂಡಬಿದಿರೆ 1, ಸುಳ್ಯದಲ್ಲಿ 1 ಮನೆ ಸೇರಿದಂತೆ ಒಟ್ಟು 34 ಮನೆಗಳು ಸಂಪೂರ್ಣ ಹಾನಿಗೊಂಡಿವೆ. ಪುತ್ತೂರಿನಲ್ಲಿ ಬರೋಬ್ಬರಿ 234, ಕಡಬ 145 ಮತ್ತು ಮಂಗಳೂರಿನಲ್ಲಿ 107 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬಂಟ್ವಾಳ, ಬೆಳ್ತಂಗಡಿ, ಮೂಡಬಿದಿರೆ. ಸುಳ್ಯ ಮುಂತಾದೆಡೆ ಕೂಡ ಹಲವು ಮನೆಗಳಿಗೆ ಹಾನಿಯಾಗಿದೆ.

74,72,639 ರೂ. ಪರಿಹಾರ ವಿತರಣೆ: ಜಿಲ್ಲೆಯಲ್ಲಿ ಮನೆ ಹಾನಿಗೆ ಸಂಬಂಧಿಸಿ ಒಟ್ಟು 74,72,639 ರೂ.ಪರಿಹಾರ ವಿತರಿಸಲಾಗಿದೆ. ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಡಿ ಇದುವರೆಗೆ ರೂ.90.64 ಲಕ್ಷ ಪರಿಹಾರವನ್ನು ಎಸ್‌ಡಿಆರ್‌ಎಫ್ ನಿಯಮಗಳನ್ವಯ ತಹಶೀಲ್ದಾರ್ ಹಂತದಲ್ಲಿ ವಿತರಿಸಲಾಗಿದೆ.

106 ಮಂದಿ ಕಾಳಜಿ ಕೇಂದ್ರದಲ್ಲಿ ಪ್ರವಾಹದಿಂದಾಗಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜಿಲ್ಲಾಡಳಿತ ತಾತ್ಕಾಲಿಕ ಕಾಳಜಿ ಕೇಂದ್ರವನ್ನು ತೆರೆದಿದ್ದು, ಸದ್ಯ 106 ಮಂದಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ಯುವಕರ ತಂಡದೊಂದಿಗೆ ಎನ್‌ಡಿಆರ್‌ಎಫ್ ತಂಡ ಕೂಟ ರಕ್ಷಣೆಯ ಕಾರ್ಯದಲ್ಲಿ ತೊಡಗಿದೆ. ಎನ್‌ಡಿಆರ್‌ಎಫ್‌ನ ೨೫ ಸಿಬ್ಬಂದಿಗಳು, ಎಸ್‌ಡಿಆರ್‌ಎಫ್ 25 ಸಿಬ್ಬಂದಿಗಳು ಮತ್ತು ಸಿವಿಲ್ ಡಿಫೆನ್ಸ್ ಪಡೆಯ 25 ಸದಸ್ಯರು ಕಾರ್ಯಾಚರಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರತಿ ತಾಲೂಕಿನಲ್ಲಿ ಅಗ್ನಿಶಾಮಕದಳ, ಹೋಂಗಾರ್ಡ್ ತಂಡಗಳು ಕಾರ್ಯಪ್ರವೃತ್ತವಾಗಿವೆ.

103 ಹೆಕ್ಟೇರ್ ಬೆಳೆ ನಾಶ: ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಜಿಲ್ಲೆಯಲ್ಲಿ 91.2 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿದೆ.12.36 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಈ ಪ್ರಮಾಣ ಹೆಚ್ಚುತ್ತಲೇ ಇದೆ.ರೈತ ಬೆಳೆದ ಬೆಳೆ ಈ ಬಾರಿ ಸಾಕಷ್ಟು ಪ್ರಮಾಣದಲ್ಲಿ ನೀರು ಪಾಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss