Wednesday, August 10, 2022

Latest Posts

ಮಳೆಯಿಲ್ಲದೆ ಕಾರ್ಯಾಚರಣೆಯಿಲ್ಲ: ಎನ್.ಡಿ.ಆರ್.ಎಫ್ ತಂಡಕ್ಕೆ ಯೋಗವೇ ಎಲ್ಲಾ!

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಕೆಲವು ದಿನಗಳಿಂದ ಮಳೆ ದೂರವಾಗಿದ್ದು, ಮಳೆಗಿಂತ ಕೊರೋನಾ ಭಯ ಕಾಡುತ್ತಿದೆ. ಪ್ರಾಕೃತಿಕ ವಿಕೋಪದ ಕಾರ್ಯಾಚರಣೆಗಾಗಿ ಬಂದಿರುವ ಎನ್.ಡಿ.ಆರ್.ಎಫ್ ಯೋಧರು ಈಗ ತಮ್ಮ ಆರೋಗ್ಯ ರಕ್ಷಣೆಗಾಗಿ ಯೋಗದ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಪ್ರತಿ ದಿನವೂ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬರುತ್ತಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಈ ಬಾರಿಯೂ ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಜನರ ಜೀವ ರಕ್ಷಣೆಗಾಗಿ ಪೂರ್ವ ಸಿದ್ಧತೆಯಾಗಿ ಎನ್.ಡಿ.ಆರ್.ಎಫ್ ಯೋಧರ ತಂಡವನ್ನು ನಿಯೋಜಿಸಲಾಗಿದೆ.
ನಗರದ ಮೈತ್ರಿ ಪೊಲೀಸ್ ಸಮುದಾಯ ಭವನದಲ್ಲಿ ಬೀಡು ಬಿಟ್ಟಿರುವ ಸಿಬ್ಬಂದಿಗಳು ಯೋಗಾಭ್ಯಾಸದಲ್ಲಿ ನಿರತರಾಗಿದ್ದಾರೆ. ಪ್ರತಿ ದಿನ ಬೆಳಗ್ಗೆ ತಂಡದ ಕಾರ್ಯ ಚಟುವಟಿಕೆಗಳ ಜೊತೆಗೆ ದೈಹಿಕ ಕ್ಷಮತೆ ಹೆಚ್ಚಿಸುವ ವ್ಯಾಯಾಮ, ಪ್ರಾಣಾಯಾಮ, ಯೋಗಾಸನದಂತಹ ಚಟುವಟಿಕೆಗಳಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ರಕ್ಷಣಾ ಕಾರ್ಯಕ್ಕೆ ಆಗಮಿಸಿರುವ ಯೋಧರ ತಂಡ ಕೊರೋನಾದಿಂದ ಸ್ವಯಂ ರಕ್ಷಣೆ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಗಮನ ನೀಡುತ್ತಿದೆ. ಬಳಿಕ ವಿವಿಧ ರಕ್ಷಣಾ ಪರಿಕರಗಳ ಸುಸ್ಥಿಯ ಬಗ್ಗೆಯೂ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಾಂಡೆಂಟ್ ಆರ್.ಕೆ. ಉಪಾಧ್ಯಾಯ, ಮಾನ್ಸೂನ್ ಪೂರ್ವದಲ್ಲಿ ನಮ್ಮ ತಂಡವನ್ನು ಜಿಲ್ಲೆಯಲ್ಲಿ ನಿಯೋಜನೆ ಮಾಡಿದ್ದು, ಭೂ ಕುಸಿತ, ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ಎಲ್ಲಾ ರೀತಿಯ ತಯಾರಿ ನಡೆದಿದೆ. ಇದೀಗ ಜಿಲ್ಲೆಯಲ್ಲಿ ಕೊರೋನಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಯೋಧರಿಗೆ ದೈಹಿಕ ಮತ್ತು ಮಾನಸಿಕ ಕ್ಷಮತೆ ಹೆಚ್ಚಿಸುವ ಯೋಗ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ. ಇದರಿಂದ ಕೊರೋನಾದಿಂದ ರಕ್ಷಣೆ ಮಾಡಿಕೊಳ್ಳಬಹುದು. ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಯೂ ಇದರಿಂದ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss