ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 2018ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಸಂತ್ರಸ್ತರಾದವರಿಗೆ ಮನೆ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದಾಗಿ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಂದಾಯ ಅಧಿಕಾರಿ ಹೇಮಂತ್ ಎಂಬವರನ್ನು ಅಮಾನತಿನಲ್ಲಿಡುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವಸತಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು, 2018ರ ಮಳೆಹಾನಿ ಸಂತ್ರಸ್ತರಿಗೆ ಜಂಬೂರು, ಕೆ.ನಿಡುಗಣೆ ಮತ್ತು ಮದೆನಾಡು ಗ್ರಾಮಗಳಲ್ಲಿ ಮನೆಗಳನ್ನು ವಿತರಿಸಲಾಗಿದೆ. ಆದರೆ ಹಿಂದಿನ ಉಪ ವಿಭಾಗಾಧಿಕಾರಿ ಜವರೇಗೌಡ ಹಾಗೂ ಕಂದಾಯ ಅಧಿಕಾರಿ ಹೇಮಂತ್ ಅವರುಗಳು ನಿಯಮ ಪಾಲಿಸದೆ ಮನೆ ಹಂಚಿಕೆ ಮಾಡಿದ್ದು, ಈ ಬಗ್ಗೆ ಅನೇಕ ಸಂತ್ರಸ್ತರು ತಮಗೆ ದೂರು ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಸೋಮಣ್ಣ ಅವರು, ಮನೆ ಹಂಚಿಕೆಯಲ್ಲಿ ಸೂಕ್ತ ಫಲಾನುಭವಿಗಳನ್ನು ಆಯ್ಕೆ ಮಾಡದೆ ನೈಜ ಫಲಾನುಭವಿಗಳಿಗೆ ವಂಚನೆ ಮಾಡಲಾಗಿದೆ.ಹೀಗಾಗಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಯಾರೇ ಭ್ರಷ್ಟಾಚಾರ ಮಾಡಿರಲಿ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರಲ್ಲದೆ, ಮೇಲ್ನೋಟಕ್ಕೆ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಾಗಿ ಶಾಸಕ ಅಪ್ಪಚ್ಚುರಂಜನ್ ಅವರು ಆರೋಪಿಸಿರುವ ಕಂದಾಯಾಧಿಕಾರಿ ಹೇಮಂತ್ ಅವರನ್ನು ಕೂಡಲೇ ಅಮಾನತು ಮಾಡುವಂತೆ ಆದೇಶಿಸಿದರು.