ಮಂಡ್ಯ : ಮಗನನ್ನು ಮಾರಿಯಾದ್ರೂ ಮಹರ್ನವಮಿ ಹಬ್ಬ ಮಾಡು’ ಎಂಬ ನಾಣ್ನುಡಿ ಹೊಂದಿರುವ ಮಹಾಲಯ ಅಮಾವಾಸ್ಯೆ (ಮಹರ್ನವಮಿ) ಆಚರಣೆಗೆ ಜಿಲ್ಲಾದ್ಯಂತ ಭರ್ಜರಿ ಸಿದ್ಧತೆ ನಡೆದಿದೆ. ಹಬ್ಬ ಆಚರಣೆ ಮೇಲೆ ಕೊರೋನಾ ಎಫೆಕ್ಟ್ ಕೊಂಚವೂ ಪರಿಣಾಮ ಬೀರದಿರುವುದು ಎಲ್ಲೆಡೆ ಕಂಡುಬಂದಿತು.
ಮಹರ್ನವಮಿ ಮುನ್ನಾ ದಿನವಾದ ಬುಧವಾರ ಮಂಡ್ಯ ನಗರ ಹಾಗೂ ಇತರ ತಾಲೂಕು ಕೇಂದ್ರಗಳಲ್ಲಿ ಹಬ್ಬದ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು. ಹಬ್ಬಕ್ಕೆ ಬೇಕಾದ ಎಡೆಸಾಮಾನು, ಬಟ್ಟೆ, ಹಣ್ಣು, ಹೂವು ಹಾಗೂ ಇತರ ವಸ್ತುಗಳ ಖರೀದಿ ಪ್ರಕ್ರಿಯೆ ಭರ್ಜರಿಯಾಗಿ ನಡೆಯಿತು.
ಹಿಂದಿನ ದಿನವೇ ಹಬ್ಬಕ್ಕೆ ಬೇಕಾದ ಬಹುತೇಕ ಅಗತ್ಯ ವಸ್ತುಗಳನ್ನು ಖರೀದಿಸುವುದರಿಂದ ನಗರದ ಪೇಟೆಬೀದಿ ಕಿಕ್ಕಿರಿದ ಜನಸಂದಣಿಯಿಂದ ತುಂಬಿಹೋಗಿತ್ತು. ಹೂವು ಮತ್ತು ಹಣ್ಣುಗಳ ವ್ಯಾಪಾರ ಬಿರುಸಿನಿಂದ ಸಾಗಿತ್ತು. ಕೊರೋನಾವನ್ನು ಸಂಪೂರ್ಣವಾಗಿ ಮರೆತುಹೋಗಿದ್ದ ಜನರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸುವ ಗೋಜಿಗೆ ಹೋಗದೆ ಹಬ್ಬದ ಸಾಮಾನುಗಳ ಖರೀದಿಯಲ್ಲಿ ನಿರತರಾಗಿದ್ದರು.
ಬಾಡೂಟದ ಘಮಲು
ಮಂಡ್ಯ ಭಾಗದಲ್ಲಂತೂ ಪಿತೃಪಕ್ಷವನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬಾಡೂಟವೇ ಈ ಹಬ್ಬದ ಪ್ರಮುಖ ಭಕ್ಷ್ಯ. ಹೀಗಾಗಿ ಹಬ್ಬದ ನೆಪದಲ್ಲಿ ಎಲ್ಲೆಡೆ ಬಡೂಟದ ಘಮಲು ಸಾಮಾನ್ಯ. ಪ್ರತಿ ಮನೆಯಲ್ಲೂ ಅದ್ಧೂರಿಯಾಗಿ ಈ ಹಬ್ಬ ಆಚರಿಸಲಾಗುತ್ತದೆ. ಮನೆಗೊಂದರಂತೆ ಮೇಕೆ-ಕುರಿಯನ್ನು ಬಲಿಕೊಟ್ಟು ಅತಿಥಿಗಳು, ನೆಂಟರಿಷ್ಟರಿಗೆ ಬಾಡೂಟ ಬಡಿಸಲಾಗುತ್ತದೆ.
ಉಳ್ಳವರು ಹಾಗೂ ಅವಿಭಕ್ತ ಕುಟುಂಬದವರು 2-3 ಕುರಿಗಳ ಮಾಂಸ ಉಪಯೋಗಿಸುವುದುಂಟು. ಬಾಡೂಟ ಮಾಡುವುದು ಹಬ್ಬ ಯಾವ ದಿನದಂದು ಬರುತ್ತದೆ ಎಂಬುದನ್ನು ಅವಲಂಬಿಸಿರುತ್ತದೆ. ಕುಟುಂಬಗಳನ್ನು ಆಧರಿಸಿ ಸೋಮವಾರ, ಗುರುವಾರ, ಶನಿವಾರ ಹಬ್ಬ ಬಂದರೆ, ಮಾಂಸದೂಟವನ್ನು ಮಾರನೆಯ ದಿನಕ್ಕೆ ಮುಂದೂಡಲಾಗುತ್ತದೆ. ಹಬ್ಬದ ದಿನದಂದು ಕೇವಲ ಸಿಹಿ ಊಟ ಮಾಡಲಾಗುತ್ತದೆ. ಈ ವರ್ಷ ಹಬ್ಬ ಗುರುವಾರ ಬಂದಿದೆ. ಹೀಗಾಗಿ ಕೆಲವು ಗ್ರಾಮಗಳಲ್ಲಿ ಶುಕ್ರವಾರಕ್ಕಕೆ ಮುಂದೂಡಲ್ಪಟ್ಟಿದೆ.