ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಸುರಿದ ಮಹಾಮಳೆಗೆ ಭಾರೀ ಹಾನಿ ಸಂಭವಿಸಿದ್ದು, ಬರೋಬ್ಬರಿ 290 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಜಿ.ಜಗದೀಶ ಅವರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನೆರೆಹಾನಿ ನಷ್ಟದ ಅಂದಾಜಿನ ಕುರಿತು ಇಲಾಖೆಗಳಿಂದ ಪ್ರಾಥಮಿಕ ವರದಿ ಪಡೆಯಲಾಗಿದೆ. ಅದರಂತೆ ಜಿಲ್ಲಾ ಮುಖ್ಯ ರಸ್ತೆಗಳಿಗೆ 38 ಕೋಟಿ ರೂ., ನಗರದ ರಸ್ತೆಗಳಿಗೆ 33 ಕೋಟಿ ರೂ., ಗ್ರಾಮೀಣ ರಸ್ತೆಗಳಿಗೆ 21 ಕೋಟಿ ರೂ., ಮೆಸ್ಕಾಂಗೆ 4.25 ಕೋಟಿ ರೂ., ಮನೆಗಳಿಗೆ 4 ಕೋಟಿ ರೂ., ಸೇತುವೆಗಳಿಗೆ 2 ಕೋಟಿ ರೂ.ಗಳಷ್ಟು ನಷ್ಟವಾಗಿದೆ.
ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದ್ದು, 167ಮನೆಗಳಿಗೆ ತೀವ್ರ ಹಾನಿಯಾಗಿದೆ. ಸುಮಾರು 1680 ಹೆಕ್ಟೇರು ಕೃಷಿ – ತೋಟಗಳಿಗೆ ಹಾನಿ ಸಂಭವಿಸಿದೆ. ಅವುಗಳ ನಷ್ಟ ಲೆಕ್ಕಾಚಾರ ನಡೆದಿಲ್ಲ. ಉಡುಪಿ ನಗರದಲ್ಲಿ ಸಂಭವಿಸಿದ ನಷ್ಟದ ಲೆಕ್ಕವೂ ಲಭ್ಯವಾಗಿಲ್ಲ. ಸದ್ಯದ ಅಂದಾಜಿನಂತೆ 290 ಕೋಟಿ ರೂ. ಹಾನಿಯಾಗಿರುವುದು ಕಂಡುಬಂದಿದೆ. ಎಲ್ಲ ಇಲಾಖೆಗಳಿಂದ ನಷ್ಟದ ವಿವರ ಪಡೆದ ಬಳಿಕ ನಿಖರವಾಗಿ ತಿಳಿಯಲಿದೆ. ಬಳಿಕ ನಷ್ಟದ ವರದಿಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.