Saturday, July 2, 2022

Latest Posts

ಮಹಾರಾಷ್ಟ್ರ; ಸಮ್ಮಿಶ್ರ ಸರಕಾರದಲ್ಲಿ ಬಿರುಕು

ಮಹಾರಾಷ್ಟ್ರದಲ್ಲಿ ವೈರುಧ್ಯ ಸಿದ್ಧಾಂತಗಳ ಮೂರು ಪಕ್ಷಗಳು ಜತೆಗೂಡಿ ಸರಕಾರ ರಚಿಸಿದಾಗಲೇ ಈ ಸಮ್ಮಿಶ್ರ ಸರಕಾರದ್ದು ಅಲ್ಪಾಯುಷ್ಯ ಎಂದು ಕಣಿ ಹೇಳಲಾಗಿತ್ತು. ಆ ಕಣಿಯು ಈಗ ನಿರೀಕ್ಷಿಸಿದ್ದಕ್ಕಿಂತ ಮೊದಲೇ ಸತ್ಯವಾಗುತ್ತಿರುವಂತೆ ತೋರುತ್ತಿದೆ. ಉದ್ಧವ್ ಠಾಕ್ರೆ ಅವರು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆ ಮೈತ್ರಿ ಸಾಧಿಸಿಕೊಂಡಿದ್ದರೂ ಶಿವಸೇನೆಯ ಕೆಲವು ಮುಖ್ಯ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳದಿರುವ ಸಂಕೇತ ತೋರುವುದರೊಂದಿಗೆ ಸರಕಾರದಲ್ಲಿ ಬಿರುಕು ಮೂಡುವ ಸಂಕೇತಗಳು ತೋರಿಬಂದಿವೆ.

ಎಲ್ಗಾರ್ ಪರಿಷದ್ ಅಧಿವೇಶನ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಒಪ್ಪಿಸುವ ಮುಖ್ಯಮಂತ್ರಿಯವರ ನಿರ್ಧಾರವು ಈಗ ಎನ್‌ಸಿಪಿ ಮುಖಂಡ ಶರದ್ ಪವಾರ್‌ಗೆ ತೀವ್ರ ಅಸಮಾಧಾನ ಸೃಷ್ಟಿಸಿದೆ. ಭೀಮಾ ಕೊರೆಗಾಂವ್ ಹಿಂಸಾಚಾರಕ್ಕೆ ಎಲ್ಗಾರ್ ಪರಿಷದ್‌ನ ಅಧಿವೇಶನದಲ್ಲಿ ಮಾಡಲಾದ ಪ್ರಚೋದನಾತ್ಮಕ ಭಾಷಣಗಳೇ ಕಾರಣವೆಂದು ಪೊಲೀಸರು ಅಭಿಪ್ರಾಯಿಸಿದ್ದು ಈಗ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಲಾಗಿದೆ. ಈ ಪ್ರಕರಣವನ್ನು ಕೈಬಿಡಬೇಕೆಂಬುದು ಶರದ್ ಪವಾರ್ ಆಗ್ರಹವಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಎಡಪಂಥೀಯ ಆಕ್ಟಿವಿಸ್ಟ್‌ಗಳಾದ ಸುಧೀರ್ ಧವಳೆ, ರೋನಾ ವಿಲ್ಸನ್, ಅರುಣ್ ಫೆರಿರಾ, ವೆರ್ನಾನ್ ಗೊನ್ಸಾಲ್ವಿಸ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ಆದರೀಗ ಪ್ರಕರಣವು ಎನ್‌ಐಎಗೆ ಹಸ್ತಾಂತರಿಸಲ್ಪಟ್ಟಿರುವುದರಿಂದ ರಾಜ್ಯ ಸರಕಾರವು ಪ್ರಕರಣವನ್ನು ಕೈಬಿಡುವಂತಿಲ್ಲವಾಗಿದೆ.

ಮಹಾರಾಷ್ಟ್ರದ ಗೃಹ ಸಚಿವರು ಎನ್‌ಸಿಪಿಯವರಾಗಿದ್ದರೂ ಮುಖ್ಯಮಂತ್ರಿ ಅವರನ್ನು ಲೆಕ್ಕಿಸದೆ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸುವ ತೀರ್ಮಾನ ಕೈಗೊಂಡಿರುವುದು ಶರದ್ ಪವಾರ್‌ಗೆ ರೋಷ ಬರಿಸಿದೆ.
ಕೊರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿ ಶಿವಸೇನಾ ಸರಕಾರವು ಯಾವ ರೀತಿ ನಿಲುವು ತಾಳಬಹುದು, ತನ್ನ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಬಹುದೆ ಎಂಬ ಕುರಿತಂತೆ ಕುತೂಹಲ ಮೂಡಿತ್ತು. ಆ ಕುತೂಹಲಕ್ಕೆ ಈಗ ಉದ್ಧವ್ ಠಾಕ್ರೆ ಸ್ಪಷ್ಟ ದಿಕ್ಕು ತೋರಿದ್ದಾರೆ.
ಇದಷ್ಟೇ ಅಲ್ಲದೆ, ಎನ್‌ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಗೆ ಸಂಬಂಧಿಸಿ ಕೂಡ ಮಿತ್ರ ಪಕ್ಷಗಳೊಳಗೆ ಸಂಘರ್ಷ ತಲೆದೋರಿದೆ. ಮೇ 1 ರಿಂದಲೇ ಎನ್‌ಪಿಆರ್ ಜಾರಿಗೊಳಿಸಲು ಉದ್ಧವ್ ಠಾಕ್ರೆ ಉತ್ಸುಕರಾಗಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಎನ್ ಸಿಪಿಗಳು ಎನ್‌ಪಿಆರ್‌ನ್ನು ಕೂಡ ವಿರೋಧಿಸುತ್ತಿವೆ.

ಉದ್ಧವ್ ಠಾಕ್ರೆಯವರಿಗೆ ಈಗ ಶಿವಸೇನೆಯ ಮೂಲ ಬೆಂಬಲ ಕೂಡ ಕಳೆದುಕೊಳ್ಳುವ ಭೀತಿ ತಲೆದೋರಿರುವಂತಿದೆ. ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸಿದ್ಧಾಂತಗಳಿಂದಲೆ ಬೆಳೆದು ಬಂದ ಶಿವಸೇನೆಯು ಈಗ ಈ ಎರಡು ವಿಚಾರಗಳಲ್ಲಿ ರಾಜಿ ಮಾಡಿಕೊಂಡಿದೆ ಎಂಬ ಸಂದೇಶ ರವಾನೆಯಾಗುವುದು ಅವರಿಗಿಷ್ಟವಿಲ್ಲ. ಅದಕ್ಕಾಗಿ ತಾನಿನ್ನೂ ಈ ವಿಚಾರಗಳಿಗೆ ಅಂಟಿಕೊಂಡಿದ್ದೇನೆ ಎಂದು ತೋರಿಸಿಕೊಡಲು ಅವರು ಯತ್ನಿಸುತ್ತಿದ್ದಾರೆ. ಇತ್ತ ರಾಜ್ ಠಾಕ್ರೆಯವರು ಶಿವಸೇನೆಯ ಜಾಗವನ್ನು ತುಂಬಲು ಪ್ರಯತ್ನಿಸುತ್ತಿರುವುದು ಹಾಗೂ ಅವರು ಇತ್ತೀಚೆಗೆ ಪೌರತ್ವ ಕಾಯಿದೆಯ ಪರವಾಗಿ ಸಂಘಟಿಸಿದ ರ್ಯಾಲಿಯಲ್ಲಿ ಭಾರೀ ಜನಸಂದಣಿ ಸೇರಿದ್ದುದು ಕೂಡ ಉದ್ಧವ್ ಠಾಕ್ರೆಗೆ ಆತಂಕ ಸೃಷ್ಟಿಸಿದೆ.

ಕೆಲವೇ ದಿನಗಳ ಹಿಂದಷ್ಟೆ ಉದ್ಧವ್ ಠಾಕ್ರೆಯವರು “ನಾವು ಮುಂದೆ ಬಿಜೆಪಿ ಜತೆಗೆ ಕೈ ಜೋಡಿಸುವುದೇ ಇಲ್ಲವೆಂದು ಹೇಳುವುದಿಲ್ಲ” ಎಂದು ನುಡಿಯುವ ಮೂಲಕ ಬಿಜೆಪಿಯತ್ತ ಸರಿಯುವ ಸಂಕೇತ ತೋರಿದ್ದರು. ಅಂತೂ ಮಹಾರಾಷ್ಟ್ರದ ವಿಕಾಸ್ ಅಘಾಡಿ ಸರಕಾರವು ಅಸ್ಥಿರಗೊಳ್ಳುವ ಲಕ್ಷಣಗಳು ಈಗಲೇ ತೋರಲಾರಂಭಿಸಿವೆ.
ಸಮ್ಮಿಶ್ರ ಸರಕಾರದಲ್ಲಿ ಬಿರುಕನ್ನು ಇನ್ನಷ್ಟು ಹೆಚ್ಚಿಸುವ ಇನ್ನೂ ಕೆಲವು ವಿಷಯಗಳು ಮುಂದಿನ ದಿನಗಳಲ್ಲಿ ಮುನ್ನೆಲೆಗೆ ಬರಲಿರುವುದರಿಂದ ಆಂತರಿಕ ಸಂಘರ್ಷವು ಹೆಚ್ಚುವ ಸಾಧ್ಯತೆಗಳು ಜಾಸ್ತಿಯಾಗಿವೆ.

ಉಮೇಶ.ಎನ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss