ಹೊಸ ದಿಗಂತ ವರದಿ, ಚಿತ್ರದುರ್ಗ:
ಶತಮಾನಗಳ ಹೋರಾಟದ ಫಲವಾಗಿ ಈಗ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಮಾಡುವ ಅವಕಾಶ ಬಂದಿದೆ. ಇದಕ್ಕಾಗಿ
ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ
ಎಂದು ಚಿತ್ರನಟಿ ಮಾಳವಿಕಾ ಅವಿನಾಶ್ ಹೇಳಿದರು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಹಿಳಾ ಕಾರ್ಯಕರ್ತರ ಮನೆ, ಮನೆ ಸಂಪರ್ಕ ಅಭಿಯಾನಕ್ಕೆ ನಗರದ ವಿ.ಪಿ.ಬಡಾವಣೆಯಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಜನವರಿ 15 ರಿಂದ ಅಭಿಯಾನ ಆರಂಭವಾಗಿದೆ. ಫೆಬ್ರವರಿ 5 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿಯೊಬ್ಬರ ಮನೆ, ಮನೆಗೆ ಹೋಗಿ ನಿಧಿ ಸಂಗ್ರಹ ಮಾಡಲಾಗುತ್ತದೆ. ಇದೊಂದು ಸರ್ವಸ್ಪರ್ಶಿ ಕಾರ್ಯಕ್ರಮವಾಗಿದೆ. ಪ್ರತಿಯೊಬ್ಬರೂ ತಮ್ಮ ಕೈಲಾದ ದೇಣಿಗೆ ನೀಡುವ ಮೂಲಕ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು. ಆ ಮೂಲಕ ತಮ್ಮ ಅಳಿಲು ಸೇವೆ ಮಾಡಬೇಕೆಂದು ಮನವಿ ಮಾಡಿದರು.
ಬೆಂಗಳೂರಿನಲ್ಲಿ ಈಗಾಗಲೇ ಅಭಿಯಾನ ನಡೆಯುತ್ತಿದೆ. ಅಲ್ಲಿ ಚಿತ್ರನಟರು, ಸಾಹಿತಿಗಳು, ಉದ್ಯಮಿಗಳು, ಕ್ರೀಡಾಪಟುಗಳು ಸೇರಿದಂತೆ ಅನೇಕ ಖ್ಯಾತನಾಮರನ್ನು ಭೇಟಿ ಮಾಡಿ ನಿಧಿ ಸಂಗ್ರಹಿಸುವ ಉದ್ದೇಶವಿದೆ. ಕಲಾವಿದರು ಸಹ ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಅದರಂತೆ ದೇಶದೆಲ್ಲೆಡೆ ಪ್ರತಿಯೊಬ್ಬರೂ ದೇಣಿಗೆ ನೀಡುವ ಮೂಲಕ ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಬೇಕು. ಹೆಚ್ಚು ದೇಣಿಗೆ ನೀಡುವವರಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ ಎಂದರು.
ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಪ್ರಮುಖ್ ರಾಜಕುಮಾರ್, ಸಂಘಪರಿವಾರದ ಕಾರ್ಯಕರ್ತರಾದ ಪ್ರಭಂಜನ್, ರುದ್ರೇಶ್, ವಿಠಲ್, ಅಶೋಕ್ ಸೇರಿದಂತೆ ದುರ್ಗವಾಹಿನಿ ಸಂಘಟನೆಯ ಕಾವ್ಯ, ಶ್ವೇತಾ, ಬಿಂದುಶ್ರೀ, ಆಶಾ, ಶ್ಯಾಮಲಾ ಶಿವಪ್ರಕಾಶ್, ನಗರಸಭೆ ಸದಸ್ಯೆ ರೋಹಿಣಿ, ಚಾಲುಕ್ಯ ನವೀನ್ ಸೇರಿದಂತೆ ನೂರಾರು ಸಂಖ್ಯೆಯ ಮಹಿಳಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಜೆಸಿಆರ್ ಬಡಾವಣೆಯ ಗೋಸಾಯಿ ಕಾಲೇನಿಗೆ ಭೇಟಿ ನೀಡಿದ ಮಾಳವಿಕಾ ಅವಿನಾಶ್ ಅಲ್ಲಿನ ನಿವಾಸಿಗಳಿಂದ ದೇಣಿಗೆ ಸಂಗ್ರಹಿಸಿದರು.