ಹೊಸದಿಗಂತ ವರದಿ, ವಿಜಯಪುರ:
ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ, ತಕ್ಷಣ ಅಭಯ ಹಸ್ತ ನೀಡಲು, ನಿರ್ಭಯ ಯೋಜನೆಯಡಿ ಪೊಲೀಸ್ ಪಡೆ ಸಿದ್ಧವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹೇಳಿದರು.
ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡ ಕೇಂದ್ರ ಸರ್ಕಾರ ನಿರ್ಭಯಾ ಯೋಜನೆ ಅಡಿ ವಿತರಿಸಿದ 26 ಬೈಕ್ಗಳಿಗೆ ಚಾಲನೆ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೆ ಹೊಸ 26 ಬೈಕ್ಗಳನ್ನು ನಿರ್ಭಯ ಯೋಜನೆ ಅಡಿ ವಿತರಿಸಲಾಗಿದ್ದು, ಮಹಿಳೆ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಶೋಷಣೆ, ಮಾನವ ಕಳ್ಳ ಸಾಗಣೆ ಸೇರಿದಂತೆ ಇನ್ನಿತರ ತುರ್ತು ಸಂದರ್ಭ, ಮಹಿಳೆ, ಮಕ್ಕಳ ರಕ್ಷಣೆಗೆ ಇವು ತುಂಬಾ ಸಹಕಾರಿಯಾಗಿವೆ. ಯಾವುದೇ ಅವಘಡ, ಅನಾಹುತ ನಡೆದ ಕುರಿತು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿ, ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ಈ ಪಡೆ ಹಗಲು, ರಾತ್ರಿ ಕಾರ್ಯನಿರ್ವಹಿಸಲಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ ಮತ್ತಿತರ ಪೊಲೀಸ್ ಅಧಿಕಾರಿಗಳು ಇದ್ದರು.