ಉಡುಪಿ: ಇಲ್ಲಿನ ಮಾಜಿ ಶಾಸಕ ಯು.ಆರ್. ಸಭಾಪತಿ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಮೊಳೆ ಕೊಪ್ಪಲು ನಿವಾಸಿಯಾಗಿರುವ ಕಾಂಗ್ರೆಸ್ ಕಾರ್ಯಕರ್ತ ಚಿಕ್ಕ ಮಂಚಯ್ಯ ಅವರು ಈ ಆರೋಪ ಮಾಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಯು.ಆರ್. ಸಭಾಪತಿ ಅವರು ಕಳೆದ ವರ್ಷ ಫೆಬ್ರವರಿಯಲ್ಲಿ ತನ್ನಿಂದ ಮೂರು ಲಕ್ಷ ರೂ. ಪಡೆದಿದ್ದರು. ಇದೀಗ ಅದನ್ನು ಮರುಪಾವತಿಸದೇ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮೀನುಗಾರ ಕಾಂಗ್ರೆಸ್ನ ಮಂಡ್ಯ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ತನ್ನ ಮನೆಗೆ ಆಗಮಿಸಿದ ಸಭಾಪತಿಯವರು, ‘ನನ್ನ ಮೇಲೆ ಚೆಕ್ ಬೌನ್ಸ್ ಕೇಸ್ ದಾಖಲಾಗಿ, ಜೈಲಿಗೆ ಹೋಗುವ ಪರಿಸ್ಥಿತಿ ಬಂದಿದೆ. ಮೂರು ಲಕ್ಷ ರೂ. ಕೊಟ್ಟು ನನ್ನ ಮರ್ಯಾದೆ ಉಳಿಸು ಎಂದು ಬೇಡಿಕೊಂಡಿದ್ದರು. ನನ್ನ ಬಳಿ ಹಣ ಇಲ್ಲದ ಕಾರಣ ಬೇರೊಬ್ಬರಿಂದ ಸಾಲ ಪಡೆದು ಈ ಮೊತ್ತ ನೀಡಿರುವುದಾಗಿ ಚಿಕ್ಕ ಮಂಚಯ್ಯ ಹೇಳಿದ್ದಾರೆ.
ಸಾಲ ಪಡೆದ ಹಣವನ್ನು 15 ದಿನದಲ್ಲಿ ವಾಪಸ್ಸು ನೀಡುವ ಭರವಸೆ ಸಿಕ್ಕ ಕಾರಣ ಬಡ್ಡಿಗೆ ಹಣವನ್ನು ಪಡೆದು ನೀಡಿದ್ದೇನೆ. ಎರಡು ಮೂರು ತಿಂಗಳು ಕಳೆದರೂ ಸಭಾಪತಿ ಹಣ ವಾಪಸ್ಸು ಮಾಡಲಿಲ್ಲ. ಕಳೆದ ವರ್ಷ ಅಕ್ಟೋಬರ್ ತಿಂಗಳ 30ನೇ ತಾರೀಕಿಗೆ ಚೆಕ್ ನೀಡಿದ್ದು, ಅದು ಕೂಡ ಬೌನ್ಸ್ ಆಗಿದೆ. ಅದರ ಬಗ್ಗೆ ಪ್ರಕರಣ ದಾಖಲಿಸಲು ಮುಂದಾದಾಗ ಮನವೊಲಿಸಿ ಹಣ ನೀಡುವುದಾಗಿ ನಂಬಿಸಿದ್ದರು. ಆದರೂ ದುಡ್ಡು ಕೊಡದೇ ಯಾಮಾರಿಸಿದರು. ಕೊನೆಗೆ ಕಾಂಗ್ರೆಸ್ನ ಉನ್ನತ ನಾಯಕರ ಬಳಿ ದೂರು ನೀಡಿದಾಗ ನಾಲ್ಕು ತಿಂಗಳ ಹಿಂದೆ 50ಸಾವಿರ ರೂ. ಕೊಟ್ಟಿದ್ದಾರೆ. ಉಳಿದ ಹಣಕ್ಕಾಗಿ ಕಳೆದ ಮೂರು ತಿಂಗಳಿಂದ ಉಡುಪಿಗೆ ಬಂದು ಸಭಾಪತಿಯವರ ಭೇಟಿಗೆ ಹುಡುಕುತ್ತಿದ್ದೇನೆ. ಅವರು ಸಂಪರ್ಕಕ್ಕೂ ಸಿಗುತ್ತಿಲ್ಲ, ಕರೆಯನ್ನೂ ಸ್ವೀಕರಿಸುತ್ತಿಲ್ಲ. ಕಾಂಗ್ರೆಸ್ ನಾಯಕರು, ಪೊಲೀಸರು ಯಾರು ಕೂಡ ನನ್ನ ನೆರವಿಗೆ ಬಂದಿಲ್ಲ ಎಂದು ಚಿಕ್ಕ ಮಂಚಯ್ಯ ಆರೋಪ ಮಾಡಿದ್ದಾರೆ.