Thursday, August 11, 2022

Latest Posts

ಮಾಡಹಾಗಿಲ ಕಾಯಿ, ಅಪ್ಪೆ ಮಿಡಿಯಂತಹ ಅಪರೂಪದ ಬೆಳೆಗಳನ್ನು ಬೆಳೆಯುತ್ತಿರುವ ಪ್ರಜ್ಞಾವಂತ ಕೃಷಿಕ ಭಾರ್ಗವ! ಹೆಗಡೆ ಶಿಗೇಹಳ್ಳಿ

ಇಂದು ಜೀವವೈವಿಧ್ಯದ ಸಂರಕ್ಷಣೆಗೆ ನಶಿಸುತ್ತಿರುವ ಹಾಗೂ ಅಪರೂಪದ ಬೆಳೆಗಳನ್ನು ಬೆಳೆಯುವ ಅವಶ್ಯಕತೆ ಇದೆ. ಇದು ಕೃಷಿ ತಜ್ಞರ ಹಾಗೂ ರೈತರ ಜವಾಬ್ದಾರಿ ಕೂಡ ಆಗಿದೆ. ರೈತರು ಹೆಚ್ಚು ಬೇಡಿಕೆ ಇರುವ ಅಪರೂಪದ ಬೆಳೆಗಳನ್ನು ಬೆಳೆದರೆ ಹೆಚ್ಚಿನ ಲಾಭವನ್ನುಗಳಿಸಬಹುದಾಗಿದೆ.ಅಂತಹ ಬೆಳೆಗಳು ಯಾವುದು ಎಂದು ಗುರುತಿಸಿ ಹಾಗೂ ಮಾಹಿತಿಗಳನ್ನು ಪಡೆದು ಬೆಳೆಸುವದು ದೊಡ್ಡ ಸವಾಲಿನ ಮಾತು.ಇಂತಹ ಸವಾಲುಗಳನ್ನು ಸ್ವೀಕರಿಸಿ ಅಪರೂಪದ ಮಾಡಹಾಗಿಲ ಕಾಯಿ ಹಾಗೂ ಅಪ್ಪೆ ಮಿಡಿ ಮಾವಿನಕಾಯಿಗಳನ್ನು ಸಿರಸಿ ತಾಲೂಕಿನ ಶಿಗೇಹಳ್ಳಿಯ ಭಾರ್ಗವ ಹೆಗಡೆಯವರು ಬೆಳೆದು ಯಶಸ್ವಿಯಾಗಿದ್ದಾರೆ.


ಭಾರ್ಗವ ಹೆಗಡೆ ಶಿಗೇಹಳ್ಳಿ ಇವರು ಎಂ.ಎ(ಅರ್ಥಶಾಸ್ತ್ರ), ಎಂ.ಎ (ಸಂಗೀತ), ಎಲ್.ಎಲ್.ಬಿ ಪದವಿಗಳನ್ನು ಮುಗಿಸಿಕೊಂಡು ತಮ್ಮನ್ನು ಪೂರ್ಣ ಪ್ರಮಾಣದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇವರು ಬೆಳೆದ ಕೃಷಿ ಪರಿಸರ ಇವರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಿತು. ಮರದ ಪೊಟರೆಯೊಲ್ಲಿನ ಜೇನನ್ನು ಹಿಡಿಯುವದು,ಗೋಡೆಗಳಲ್ಲಿರುವ ಮಿಸ್ರಿ ಜೇನನ್ನು ಹಿಡಿಯುವದು ,ಅಡಿಕೆ ಮರಗಳನ್ನು ಹತ್ತುವ ಪ್ರಯತ್ನ ಮಾಡುವದು ಇಂತಹ ಇವರ ಬಾಲ್ಯದ ಕೆಲವು ಚಟುವಟಿಕೆಗಳು ಇವರಲ್ಲಿ ಸಹಜವಾಗಿಯೇ ಕೃಷಿಯಲ್ಲಿ ಆಸಕ್ತಿಯನ್ನು ಬೆಳೆಸಿತು.೩ ವರ್ಷ ಶಹರದಲ್ಲಿ ಸಂಗೀತವನ್ನು ವೃತ್ತಿಯನ್ನಾಗಿ ನಿರ್ವಹಿಸಿ ನಂತರ ತಮ್ಮ ಆಸಕ್ತಿ ಕ್ಷೇತ್ರ ಕೃಷಿಗೆ ಮರಳಿದರು.ಹಿರಿಯ ಕೃಷಿಕರಾದ ನೀರ್ನಳ್ಳಿ ಸೀತಾರಾಮ ಹೆಗಡೆ ಹಾಗೂ ಬೈರಿ ದತ್ತಣ್ಣ,ಶ್ರೀಧರ ಭಟ್ ಚವತ್ತಿನಂಥವರು ಇವರಿಗೆ ಮಾದರಿಯಾಗಿ ಕೃಷಿಯಲ್ಲಿ ಹೊಸ ಬೆಳೆಗಳನ್ನು ಬೆಳೆಯುವದರತ್ತ ಆಸಕ್ತಿಯನ್ನು ಬೆಳೆಸಿತು.ಕೇವಲ ಅಡಿಕೆ ಕಾಳುಮೆಣಸುಗಳ ಜೊತೆ ಇನ್ನಷ್ಟು ಬೆಳೆಗಳಲ್ಲಿ ವೈವಿಧ್ಯತೆಯನ್ನು ತರುವ ಪ್ರಯತ್ನ ಮಾಡುವದರತ್ತ ಗಮನ ಹರಿಸಿದರು.ಈ ನಿಟ್ಟಿನಲ್ಲಿ ಕೃಷಿ ತಜ್ಞರ ಹಾಗೂ ಅನುಭವಸ್ಥರ,ಪರಿಣಿತರ ಸಲಹೆಗಳನ್ನು ತೆಗೆದುಕೊಳ್ಳುತ್ತಾ ಹೊಸ ಬೆಳೆಗಳನ್ನು ಬೆಳೆಯುವದರತ್ತ ಹೆಜ್ಜೆ ಹಾಕಿದರು.ಇದರ ಪ್ರಯತ್ನದ ಫಲವಾಗಿ ಇಂದು ಇವರು ಅಡಿಕೆ,ಕಾಳುಮೆಣಸು ಗಳ ಜೊತೆಗೆ ಅಗರ್ ಹುಡ್,ಮಾಡಹಾಗಿಲ ಕಾಯಿ,ಅಪ್ಪೆಮಿಡಿ ಮಾವಿನ ಕಾಯಿಗಳನ್ನು ಕೃಷಿ ಬೆಳೆಗಳಾಗಿ ಬೆಳೆಯುತ್ತಿದ್ದಾರೆ.


ಭಾರತದ ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್ ಗಳಲ್ಲಿ ಅಗರ್‌ವುಡ್‌ನ್ನು ತುಂಬಾ ವರ್ಷಗಳಿಂದ ಬೆಳೆಯುತ್ತಾ ಆರ್ಥಿಕವಾಗಿ ಲಾಭಗಳಿಸುತ್ತಿದ್ದಾರೆ. ನಮ್ಮ ಕರ್ನಾಟಕದ ಮಲೆನಾಡ ಪ್ರದೇಶಗಳಲ್ಲಿ ಈ ಬೆಳೆಯು ಪರಿಚಯವಾಗಿ ತುಂಬಾ ವರ್ಷಗಳು ಸಂಧಿಲ್ಲ. ಭಾರ್ಗವ ಹೆಗಡೆಯವರು 10 ವರ್ಷಗಳ ಹಿಂದೆ ಅವರ ಕೃಷಿ ಪ್ರದೇಶದಲ್ಲಿ ಅಗರ್‌ವುಡ್ ಗಿಡಗಳನ್ನು ನೆಟ್ಟಿದ್ದರು. 10 ವರ್ಷದಲ್ಲಿ ಅವುಗಳ ಸುತ್ತಳತೆ 25-30 ಇಂಚಿನಷ್ಟು ಬೆಳೆದಿದೆ.ಈಗ ಅವು ಇನಾಕ್ಯೂಲೆಷನ್ ಹಂತದಲ್ಲಿವೆ. 2 ವರ್ಷಗಳ ಹಿಂದೆ ಇನಾಕ್ಯೂಲೆಷನ್ ಮಾಡಿದ ಮರ ಸಂಸ್ಕರಣೆಯನ್ನು ಮಾಡಲಾಗಿದ್ದು ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಇವುಗಳನ್ನು ಸಂಸ್ಕರಿಸಿ ತೆಗೆದ ತೈಲವನ್ನು ಸುಗಂಧ ದ್ರವ್ಯಕ್ಕೆ , ಅಗರಬತ್ತಿಗೆ ಹಾಗೂ ಔಷಧಗಳಿಗೆ ಬಳಸಲಾಗುತ್ತದೆ ಎಂದು ಭಾರ್ಗವ ಹೆಗಡೆಯವರು ಹೇಳುತ್ತಾರೆ.
ಇದಲ್ಲದೇ ಇವರು ಮಾಡಹಾಗಲಕಾಯಿ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ.ಈ ಮೊದಲು ಅವರು ಸ್ಥಳೀಯ ಮಾಡಹಾಗಲ ಕೃಷಿಯನ್ನು ಮಾಡುತ್ತಿದ್ದರು. ಸಾಮಾನ್ಯವಾಗಿ ಮಾಡಹಾಗಲಕಾಯಿ ಕಾಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಗಡ್ಡೆಯಿಂದ ಚಿಗುರಿ ಹಬ್ಬಿ ಕಾಯಿ ಬಿಡುವ ಸಸ್ಯವಾಗಿದೆ.ಆಂಗ್ಲ ಭಾಷೆಯಲ್ಲಿ ಇದಕ್ಕೆ ಸ್ಪೈನ್ ಗೋರ್ಡ್ ಎಂದು ಹೇಳಲಾಗುತ್ತದೆ.ಇದು ಒಂದು ಪೌಷ್ಟಿಕ ತರಕಾರಿಯಾಗಿದ್ದು ಹಾಗೂ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ.ಇದು ಮಧುಮೇಹ, ಮೂತ್ರಕೋಶದ ಕಲ್ಲು, ಉದರದ ಸಮಸ್ಯೆಗಳಿಗೆ ತುಂಬಾ ಒಳ್ಳೆಯ ಮದ್ದಾಗಿದೆ.ಇವುಗಳಿಗೆ ಹಾಗಲಕಾಯಿಯ ಹೋಲಿಕೆಗಳಿದ್ದರೂ ಅಕಾರದಲ್ಲಿ ಸಣ್ಣ ಇದ್ದು ದುಂಡಗೇ ಇರುವದರಿಂದ ಇವುಗಳನ್ನು ಸುಲಭವಾಗಿ ಗುರುತಿಸಬಹುದು. ಗೌಡ ಸಾರಸ್ವತರಿಗೆ ಇದು ಪ್ರಿಯವಾದ ತರಕಾರಿ. ಗೌಡ ಸಾರಸ್ವತರು ಇದಕ್ಕೆ ಪಾಗಿಳ ಎಂದು ಕರೆಯುತ್ತಾರೆ ಹಾಗೂ ಇದರ ಹಲವಾರು ರೀತಿಯ ಅಡುಗೆಗಳನ್ನು ಮಾಡುತ್ತಾರೆ.ಸ್ಥಳೀಯ ಮಾಡಹಾಗಲ ಕೃಷಿಯನ್ನು ವೃತ್ತಿಪರವಾಗಿಸಿಕೊಳ್ಳಲು ಕಷ್ಟ ಎನಿಸಿದ್ದರಿಂದ ಇವರು ಕಳೆದ ವರ್ಷದಿಂದ ಚೆಟ್ಟಲ್ಲಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಸಂಶೋಧಿಸಿ ಬೆಳೆಸಲಾದ ಗಿಡಗಳನ್ನು ತಂದು ನೆಟ್ಟಿದ್ದಾರೆ. ಕಾಡುಗಳ ನಾಶದಿಂದ ಅಪರಿಚಿತವಾಧ ಈ ಬೆಳೆಯನ್ನು ಭಾರ್ಗವ ಹೆಗಡೆಯಂತಹ ಕೃಷಿಕರು ಪುನಃ ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ. ಸ್ಥಳೀಯ ಮಾಡಹಾಗಲ ಅಗಸ್ಟ್ ನಿಂದ ಸಪ್ಟೆಂಬರ್ ತಿಂಗಳು ಮಾತ್ರ ಇಳುವರಿಯಮನ್ನು ಕೊಡುತ್ತದೆ.ಆದರೆ ಚೆಟ್ಟಲ್ಲಿ ಸಂಶೋಧನಾ ಕೇಂದ್ರದಿಂದ ತಂದ ಗಿಡಗಳು ಮೇ ದಿಂದ ಸಪ್ಟೆಂಬರ್ ತನಕವೂ ಇಳುವರಿಯನ್ನು ನೀಡುತ್ತದೆ.ಸ್ಥಳೀಯ ಮಾಡಹಾಗಲ ಕಾಯಿಗೆ ಪರಕೀಯ ಪರಾಗಸ್ಪರ್ಶದ ಅಗತ್ಯತೆ ಇರುವದಿಲ್ಲ. ಸಂಶೋಧಿತ ತಳಿಗೆ ಪರಕೀಯ ಪರಾಗಸ್ಪರ್ಶದ ಅಗತ್ಯದೆ ಇದೆ ಹಾಗೂ ಈ ಮಾಡಹಾಗಲ ಕಾಯಿಯೂ ಸ್ಥಳೀಯ ತಳಿಗಿಂತ ಜಾಸ್ತಿ ತೂಕವಿರುತ್ತದೆ. ಇವರು ಪೆಬ್ರುವರಿಯಲ್ಲಿ ಗಡ್ಡೆಗಳಿಂದ ಸಸಿ ಮಾಡಿದ ಸುಮಾರು ೫೫೦ ಗಿಡಗಳನ್ನು ನರ್ಸರಿಯಿಂದ ತಂದು ಕಾಲು ಎಕರೆ ಪ್ರದೇಶದಲ್ಲಿನೆಟ್ಟಿದ್ದಾರೆ. ಸಾವಯವ ಗೊಬ್ಬರ ಹಾಗೂ ಮಣ್ಣಿನ ಮಿಶ್ರಣಗಳ ಬೆಡ್ ಗಳನ್ನು ಮಾಡಿಕೊಂಡು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 4 ಪೀಟ್ ಅಂತರ ಸಿಗುವಂತೆ ಈ ಸಸಿಗಳನ್ನು ನೆಟ್ಟಿದ್ದಾರೆ.ಕೀಟಗಳು ಬಾರದಂತೆ ತಡೆಯಲು ಇವರು ಪ್ಲಾಸ್ಟಿಕ್ ಹೊದಿಕೆಯನ್ನು ಬೆಡ್‌ಗಳಿಗೆ ಮುಚ್ಚಿದ್ದಾರೆ.ಗಿಡಗಳನ್ನು ಕೋಲು ಹಾಗೂ ಬಲೆಗಳ ಸಹಾಯದಿಂದ ಹಬ್ಬಿಸಿ ಆಧಾರ ಕೊಟ್ಟಿದ್ದಾರೆ ಹಾಗೂ ಇವುಗಳ ನೀರಾವರಿಗೆ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಇತರೆ ಬಳ್ಳಿಯಲ್ಲಿ ಆಗುವ ತರಕಾರಿಗಳಲ್ಲಿ ಹೆಣ್ಣು ಹೂವು,ಮತ್ತು ಗಂಡು ಹೂವುಗಳು ಒಂದೇ ಬಳ್ಳಿಯಲ್ಲಿ ಬಿಡುತ್ತವೆ.ಆದರೆ ಈ ತರಕಾರಿಯಲ್ಲಿ ಹೆಣ್ಣು ಬಳ್ಳಿ ಬೇರೆ ಹಾಗೂ ಗಂಡು ಬಳ್ಳಿ ಬೇರೆ ಇರುತ್ತದೆ.ಗಂಡು ಬಳ್ಳಿ ಕೇವಲ ಹೂವುಗಳನ್ನು ಮಾತ್ರ ಬಿಡುತ್ತದೆ.ಹೆಣ್ಣು ಬಳ್ಳಿ ಮಿಡಿಯೊಂದಿಗೆ ಹೂವನ್ನು ಬಿಡುತ್ತದೆ.100 ಹೆಣ್ಣು ಸಸಿಗಳಿಗೆ 10 ಗಂಡುಸಸಿಗಳಲೆಕ್ಕಾಚಾರದಂತೆ 500 ಹೆಣ್ಣು ಸಸಿಗಳಿಗೆ 50 ಗಂಡುಸಸಿಗಳನ್ನು ನೆಟ್ಟಿದ್ದಾರೆ.ಗಿಡ ನೆಟ್ಟು 40 ದಿನಗಳಲ್ಲಿ ಇವು ಹೂವು ಬಿಡಲು ಆರಂಭಿಸುತ್ತವೆ.ಹೂವುಗಳಿಗೆ ಪರಾಗಸ್ಪರ್ಶ ಮಾಡಿ 10-11 ದಿನಗಳಿಗೆ ಕೊಯ್ಲು ಮಾಡಬೇಕು ಎಂದು ಭಾರ್ಗವ ಅವರು ಹೇಳುತ್ತಾರೆ.ಹೂವುಗಳಿಗೆ ಪರಾಗಸ್ಪರ್ಶ ಮಾಡುವದು ಸರಳ.ಬೆಳಿಗ್ಗೆ 9 ಗಂಟೆಯ ಮೊದಲು ಗಂಡು ಹೂವನ್ನು ಕಿತ್ತು ಹೆಣ್ಣು ಹೂವಿನ ಕಳಂಕದ(ಸ್ಟಿಗ್ಮಾ) ಮೇಲೆ ಉಜ್ಜಬೇಕು.ಕಾಲು ಎಕರೆ ಪ್ರದೇಶಕ್ಕೆ ಪರಾಗಸ್ಪರ್ಶ ಮಾಡಲು ಒಂದು ಗಂಟೆ ಸಾಕಾಗುತ್ತದೆ ಹಾಗೂ ಪರಾಗಸ್ಪರ್ಶ ಸರಳವಾದದ್ದರಿಂದ ಸಣ್ಣ ಮಕ್ಕಳು ಕೂಡ ಇದನ್ನು ಮಾಡಬಹುದು. ಮಾಡಹಾಗಲ ಸಾವಯವ ಕೃಷಿಗೆ ಹೊಂದುಕೊಳ್ಳುತ್ತದೆ ಹಾಗೂ ಈ ವರೆಗೆ ಮಾಡಹಾಗಲ ಕೃಷಿಗೆ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲ ಎಂದು ಭಾರ್ಗವ ಹೆಗಡೆಯವರು ಹೇಳುತ್ತಾರೆ. ಹೊಸ ಬೆಳೆಯಾದರೂ ಈ ಬೆಳೆ ಮಲೆನಾಡ ವಾತಾವರಣಕ್ಕೆ ಒಳ್ಳೆ ರೀತಿಯಲ್ಲಿ ಹೊಂದುಕೊಳ್ಳುತ್ತದೆ ಹಾಗೂ ಉಷ್ಣತೆ ಜಾಸ್ತಿಯಾಗದಂತೆ ನೋಡಿಕೊಂಡರೆ ಒಳ್ಳೆಯ ಇಳುವರಿಯನ್ನು ಪಡೆದುಕೊಳ್ಳಬಹುದು.ಪೆಬ್ರುವರಿ ತಿಂಗಳಿನಲ್ಲಿ ನೆಟ್ಟ ಗಿಡಗಳಿಂದ ಇವರು ಮೇ ತಿಂಗಳಿನಿಂದಲೇ ಬೆಳೆಗಳ ಕೊಯ್ಲನ್ನು ಅರಂಭಿಸಿದ್ದಾರೆ.ವಾರಕ್ಕೆ ೨ ಬಾರಿ ಕೊಯ್ಲು ಮಾಡುತ್ತಿದ್ದು ಸುಮಾರು ೬೦ ಕೆಜಿಯಷ್ಟು ಇಳುವರಿ ಸಿಗುತ್ತಿದೆ ಎಂದು ಹೇಳಿದ್ದಾರೆ.


ಈಗ ಅವರು ಕೊಯ್ಲು ಮಾಡಿದ ಮಾಡಹಾಗಲಕಾಯಿಗಳನ್ನು ಕುಮಟಾ ,ಹೊನ್ನಾವರ,ಭಟ್ಕಳ,ಗೋವಾಕ್ಕೆ ಕಳುಹಿಸಿಕೊಡುತ್ತಿದ್ದಾರೆ.ಶ್ರಾವಣ ಮಾಸದಲ್ಲಿ ಇದಕ್ಕೆ ಕೆಜಿಗೆ 500 ರೂಪಾಯಿತನಕವೂ ಮಾರಾಟವಾಗುತ್ತದೆ ಎಂದು ಅವರು ಹೇಳುತ್ತಾರೆ.ಒಮ್ಮೆ ಬೀಜದಿಂದ ಬಳ್ಳಿಯಾದರೆ ನಂತರ ಗಡ್ಡೆಯಿಂದ ವರ್ಷ ವರ್ಷವೂ ಚಿಗುರಿ ಕಾಯಿ ಬಿಡುತ್ತದೆ.ಒಳ್ಳೆಯ ಮಾರ್ಕೆಟ್ ಕಂಡುಕೊಂಡರೆ ಕಡಿಮೆ ಅವಧಿಯ,ಕಾಲು ಎಕರೆ ಜಾಗದಲ್ಲೂ ಬೆಳೆಸಬಹುದಾತಂಹ ಈ ಬೆಳೆಯಲ್ಲಿ ಹೆಚ್ಚಿನ ಲಾಭಗಳಿಸಬಹುದು ಎಂದು ಭಾರ್ಗವ ಹೆಗಡೆಯವರು ಹೇಳುತ್ತಾರೆ.
ಅಪ್ಪೆ ಮಿಡಿ ಮಾವಿನಕಾಯಿ ಎಂದರೆ ಯಾರಿಗೆ ಇಷ್ಟ ಆಗೋಲ್ಲಾ ಹೇಳಿ.ಅದರ ಸುಗಂಧಿತ ಪರಿಮಳಕ್ಕೆ ಮನಸೋತದವರಾರು?. ಹೆಸರನ್ನೇ ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ.ಸಾಮಾನ್ಯವಾಗಿ ಅಪ್ಪೆ ಮಿಡಿ ಮಾವಿನಕಾಯಿಗಳು ಮಲೆನಾಡಿನಲ್ಲಿ ಕೆಲವೇ ಪ್ರದೇಶಗಳಲ್ಲಿ ಕಾಣಸಿಗುತ್ತವೆ.ಇದರ ಉಪ್ಪಿನಕಾಯಿಗಳು ಹೆಸರುವಾಸಿಯಾಗಿವೆ. ಭಾರ್ಗವ ಹೆಗಡೆಯವರುಇಂತಹ ಅಧ್ಭುತ ಹಾಗೂ ಅಪರೂಪದ ಅಪ್ಪೆ ಮಾವಿನಕಾಯಿಗಳ ಕೃಷಿಯನ್ನೂ ಕೂಡ ಕಳೆದ 10 ವರ್ಷಗಳಿಂದ ಮಾಡುತ್ತಿದ್ದಾರೆ.
ಇವರು ಸುಮಾರು 1000 ಕ್ಕೂ ಹೆಚ್ಚು ಅಪ್ಪೆ ಮಿಡಿ ಗಿಡಗಳನ್ನು ತಮ್ಮ ಕೃಷಿ ಪ್ರದೇಶಗಳಲ್ಲಿ ಬೆಳೆಸಿ ಸಾಹಸಿ ಕೃಷಿಕರಾಗಿದ್ದಾರೆ.ಅವುಗಳಲ್ಲಿ ಸುಮಾರು 300ಗಿಡಗಳು ನಂದಗಾರು ತಳಿಯದು,300 ಗಿಡಗಳು ಮಾಳಂಜಿ ತಳಿಯದು,300ಗಿಡಗಳು ಹಳದೋಟತಳಿಯದು ಹಾಗೂ ಉಳಿದ 100 ಬೇರೆ ಬೇರೆ ರೀತಿಯ ತಳಿಯದಾಗಿವೆ. ಇವರ ಹತ್ತಿರ ಸುಮಾರು 40-50 ಅಪ್ಪೆ ಮಿಡಿ ತಳಿಗಳ ಸಂಗ್ರಹವಿದೆ.ಮೂಲ ಮರದಿಂದ ರೆಂಬೆಗಳನ್ನು ತಂದು ಸ್ವತಃ ಕಸಿಯನ್ನು ಮಾಡಿಕೊಂಡು ಈ ಅಪ್ಪೆ ಮಿಡಿ ಗಿಡಗಳನ್ನು ಬೆಳೆಸಿದ್ದಾರೆ.ಯಾವುದೇ ಪ್ರಿಸರ್‍ವೇಟಿವ್ ಬಳಸದೇ ಇವುಗಳಿಂದ ಮಾಡಿದ ಉಪ್ಪಿನಕಾಯಿ ಸುಮಾರು ೨ ವರ್ಷಗಳ ವರೆಗೆ ಹಾಳಾಗದೇ ಇಡಬಹುದು.ಈ ಉಪ್ಪಿನಕಾಯಿ ಮಿಡಿಗಳಿಗೆ ಜೀರಿಗೆ ಪರಿಮಳವಿರುತ್ತದೆ.
ಇವರು ಈ ಗಿಡಗಳಿಗೆ ವರ್ಷಕ್ಕೆ ೨ ಸಲ ಗೊಬ್ಬರಹಾಕುತ್ತಾರೆ ಹಾಗೂ ಇವುಗಳ ನೀರಾವರಿಗೆ ಹನಿನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ.ಈ ಗಿಡಗಳಿಗೆ ಮಳೆಗಾಲದಲ್ಲಿ ಶಿಲೀಂದ್ರ ರೋಗಳ ನಿರ್ವಹಣೆಗೆ ಬೋರ್ಡೋ ದ್ರಾವಣವನ್ನು ಕೂಡ ಸಿಂಪಡಿಸಿತ್ತಾರೆ.ಗಿಡಗಳು ಚಿಗುರಿದಾಗ ಎಲೆಗಳನ್ನು ತಿನ್ನುತ್ತಿದ್ದರೆ ಶಿಫಾರಿತ ಕೀಟನಾಶಕಗಳನ್ನು ಬಳಸುತ್ತಾರೆ.ಗಿಡಗಳನ್ನು ನೆಟ್ಟು ಕೊಯ್ಲು ಮಾಡಲು ಸುಮಾರು 5-6 ವರ್ಷಗಳು ಬೇಕಾಗುತ್ತದೆ ಹಾಗೂ ಕೆಲವು ತಳಿಗಳು ಇಳುವರಿಯನ್ನು ಕೊಡಲು ಜಾಸ್ತಿ ವರ್ಷಗಳೇ ಬೇಕಾಗಬಹುದು.ಇವರಿಗೆ ಕಳೆದ 4 ವರ್ಷದಿಂದ ಅಪ್ಪೆ ಮಿಡಿ ಮಾವಿನಕಾಯಿಗಳ ಒಳ್ಳೆಯ ಇಳುವರಿ ಸಿಗುತ್ತಿದೆ.ವರ್ಷಕ್ಕೆ ಸುಮಾರು 60-70 ಸಾವಿರ ಮಿಡಿಗಳನ್ನು ಮಾರಾಟ ಮಾಡುತ್ತಾರೆ.ಒಂದು ಮಿಡಿಗಳಿಗೆ 3-6 ರೂಪಾಯಿಯಂತೆ ತಳಿಗಳಿಗೆ ಹೊಂದಿಕೊಂಡು ಮಾರಾಟಮಾಡುತ್ತಾರೆ.ಕಾಡುಗಳು ನಾಶವಾಗಿರುವದರಿಂದ ಅಳಿವಿನಂಚಲಿರುವ ಮಲೆನಾಡಿನ ಅಪ್ಪೆ ಮಿಡಿ ತಳಿಗಳನ್ನು ಬೆಳೆಸಿ ಅಭಿವೃದ್ದಿ ಪಡಿಸಿರುವ ಇವರ ಕೆಲಸ ಶ್ಲಾಘನೀಯವಾಗಿದೆ.
ಇವರ ಕೃಷಿ ಭೂಮಿಯಲ್ಲಿ ಸುಮಾರು 100 ಹೆಚ್ಚು ಜಾಯಿಕಾಯಿ ಮರಗಳಿವೆ.ಇವರು ಜೇನು ಹಾಗೂ ಮಿಸ್ರಿ ಜೇನು ಕೃಷಿಯಲ್ಲಿ ಕೂಡ ಆಸಕ್ತಿಯನ್ನು ಹೊಂದಿದ್ದಾರೆ.ವಿಶೇಷ ಆರೈಕೆ ಬೇಡದ ಈ ಮಿಸ್ರಿ ಜೇನುಗಳನ್ನು ಹಲವು ಕಡೆ ಸಾಕಬಹುದು.ಇವರು ಪ್ಲಾಸ್ಟಿಕ್ ಡಬ್ಬಗಳಲ್ಲಿ , ಬಿದಿರು ಘಳದಲ್ಲಿ ಹೀಗೆ ಹಲವು ಕಡೆ ಮಿಸ್ರಿ ಜೇನುಗಳನ್ನು ಸಾಕಿದ್ದಾರೆ ಹಾಗೂ ಇವರಲ್ಲಿ ಸುಮಾರು ೫೦ಕ್ಕೂ ಹೆಚ್ಚು ಇವುಗಳ ಕುಟುಂಬಗಳಿವೆ . ಮಿಸ್ರಿ ಜೇನು ಬೇರೆ ಜೇನುಹುಳಗಳಂತೆ ಹೆಚ್ಚು ಜೇನನ್ನು ಕೊಡದೇ ಇದ್ದರೂ ಈ ಜೇನನ್ನು ಅಯುರ್ವೇದ ಔಷಧಗಳಲ್ಲಿ ಜಾಸ್ತಿ ಬಳಸಲಾಗುತ್ತದೆ.ಭಾರ್ಗವ ಹೆಗಡೆಯವರು ಪಾರಂಪರಿಕ ಜ್ಞಾನದ ಜೊತೆಗೆ ಕೃಷಿ ತಜ್ಞರಾದ ಡಾ.ವಿ.ಎಮ್.ಹೆಗಡೆಯವರಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ಪ್ರಯೋಗಶೀಲ ಕೃಷಿಕರಾಗಿದ್ದಾರೆ.
ಹಲವಾರು ಜನ ಜೊತೆ ಸೇರಿ ಊರಿನ ಅರಣ್ಯ ಸಮಿತಿಯಿಂದ ಊರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಹಲವು ಇಂಗುಗುಂಡಿಯನ್ನು ಮಾಡಿದ್ದೇವೆ. ಇದರಿಂದ ಊರಿನ ಎಲ್ಲ ಜನರಿಗೂ ಪ್ರಯೋಜನವಾಗಿದೆ ಎಂದು ಅವರು ಹೇಳುತ್ತಾರೆ.ಇವರು ಕೃಷಿಯ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಸುಜಾತಾ,ಅಡಿಕೆ ಪತ್ರಿಕೆಹಾಗೂ ಇತರ ಹಲವಾರು ಕೃಷಿ ಪತ್ರಿಕೆಗಳನ್ನು ಓದುವದನ್ನು ಹವ್ಯಾಸ ಮಾಡಿಕೊಂಡಿದ್ದಾರೆ.2007 ರಿಂದ ಇವರು ಕೃಷಿಯ ಲೆಕ್ಕಾಚಾರಕ್ಕೆ ಮೈಕ್ರೋಸೋಪ್ಟ ಎಕ್ಸೆಲ್‌ನ್ನು ಬಳಸಿಕೊಳ್ಳುತ್ತಿದ್ದಾರೆ.ಈ ತಂತ್ರಾಂಶಗಳನ್ನು ಉಪಯೋಗಿಸಿರುವದರಿಂದ ಕೃಷಿಕರಿಗೆ ಕೃಷಿಯ ನಿಖರ ಲಾಭ ,ವೆಚ್ಚಗಳು ತಿಳಿಯಲ್ಪಡುತ್ತವೆ ಹಾಗೂ ಸಮಯವು ವ್ಯರ್ಥವಾಗುವದಿಲ್ಲ. ಇವರು ತೋಟಗಾರಿಕಾ ಇಲಾಖೆ ಸಿರಸಿ ಯವರ ಸಹಾಯಧನ ಸಹಕಾರದಿಂದ ಅಡಿಕೆ ಸುಲಿಯುವ ಯಂತ್ರ ಹಾಗೂ ಇತರೇ ಕೃಷಿ ಯಂತ್ರೋಪಕರಣಗಳನ್ನು ಖರೀದಿಸಿ ಬಳಕೆಮಾಡುತ್ತಿದ್ದಾರೆ.ಕೃಷಿಯಲ್ಲಿ ಯಂತ್ರೋಪಕರಣಗಳನ್ನು ಬಳಸುವದರಿಂದ ಕೃಷಿ ಕಾರ್ಮಿಕರುಸಿಗದೇ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೇಯೇ ಕೃಷಿ ಕೆಲಸಗಳನ್ನು ಬೇಗ ಮುಗಿಸಬಹುದು. ಕೃಷಿ ಕ್ಷೇತ್ರ ಯುವ ಪೀಳಿಗೆಗೆ ಕೃಷಿ ಯಂತ್ರೋಪಕರಣ ತಯಾರಿಕಾ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶ ಕೊಡುವ ದೊಡ್ಡ ಕ್ಷೇತ್ರವಾಗಲಿದೆ ಎಂದು ಭಾರ್ಗವ ಹೆಗಡೆಯವರು ಹೇಳುತ್ತಾರೆ.ಬೆಳೆಗಳಲ್ಲಿ ವೈವಿಧ್ಯತೆ ಇದ್ದರೆ ರೈತರು ತಮ್ಮ ಅಧಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇವರೆಲ್ಲಾ ಉದಾಹರಣೆಯಾಗಿದ್ದಾರೆ.ಪಾರಂಪರಿಕ ಜ್ಞಾನದ ಜೊತೆ ಹೊಸ ಹೊಸ ಸಂಶೋಧಿತ ಕೃಷಿ ವಿಧಾನ ಹಾಗೂ ಇತರೆ ಬೆಳೆಗಳನ್ನು ಬೆಳೆದರೆ ಕೃಷಿಯಲ್ಲಿ ಯಶಸ್ಸು ಕಾಣಬಹುದು.ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಇವರ ಹಸಿವು ಹಲವಾರು ಬೆಳೆಗಳನ್ನು ಬೆಳೆಯುವ ಪ್ರಯೋಗಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿದೆ.

ಮಧುರಾ ಕೂಡಗಟ್ಟಿಗೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss