ಹೊಸದಿಲ್ಲಿ: ದೇಶದೊಳಗಿನ ರಾಜಕೀಯಕ್ಕೆ ಭಾರತದೊಂದಿಗಿನ ಗಡಿ ನಕ್ಷೆಯನ್ನು ಬದಲಾಯಿಸುವ ಯತ್ನಕ್ಕೆ ಮುಂದಾಗಿರುವ ನೇಪಾಳದ ಪ್ರಧಾನಿ ಕೆ.ಪಿ.ಶರ್ಮ ಒಲಿ ಅವರ ಕೈಯ್ಯಲ್ಲೇ ಈಗ ಉಭಯ ದೇಶಗಳ ನಡುವೆ ಮಾತುಕತೆಗಾಗಿ ಸೂಕ್ತ ವಾತಾವರಣ ಕಲ್ಪಿಸುವ ಜವಾಬ್ದಾರಿಯಿದೆ ಎಂಬುದಾಗಿ ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ.
ಇದೊಂದು ಒಲಿ ಅವರ ‘ಸಮೀಪದೃಷ್ಟಿ’ಯ ಕಾರ್ಯಸೂಚಿಯಾಗಿದ್ದು, ರಾಜಕೀಯ ಲಾಭಗಳಿಗೆ ಇದರ ಹಿಂದಿನ ಉದ್ದೇಶವಾಗಿದೆ. ಈ ನಕ್ಷೆ ಬದಲಾಯಿಸಿರುವುದಕ್ಕೆ ಯಾವುದೇ ಸತ್ಯ ಅಥವಾ ದಾಖಲೆಯ ಆಧಾರ ಇಲ್ಲ. ಇದೊಂದು ಗಡಿ ವಿಷಯವನ್ನು ರಾಜಕೀಯಗೊಳಿಸುವ ಯತ್ನ.ದಶಕಗಳ ಗಡಿ ವಿಷಯವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸಿಕೊಳ್ಳುವಲ್ಲಿ ಒಲಿ ಸರಕಾರ ಗಂಭೀರವಾಗಿಲ್ಲ ಎಂದು ಅವರು ಹೇಳಿದ್ದಾರೆ.ಒಲಿ ಸರಕಾರವು ಲಿಪುಲೇಖ್, ಕಾಲಾಪಾನಿ, ಲಿಂಪಿಯಾಧುರಗಳನ್ನು ನೇಪಾಳದ ಭಾಗವೆಂದು ಹೇಳಿಕೊಂಡು ಹೊಸ ನಕ್ಷೆ ರೂಪಿಸಿ ಇತ್ತೀಚೆಗೆ ಸಂಸತ್ತಿನ ಕೆಳಮನೆಯ ಅಂಗೀಕಾರವನ್ನೂ ಪಡೆದುಕೊಂಡಿತ್ತು.ಇದರ ಹಿಂದೆ ಕುಟಿಲ ಚೀನಾದ ಕುಮ್ಮಕ್ಕು ಕೂಡ ಇರುವುದನ್ನು ಭಾರತ ಈಗಾಗಲೇ ಗುರುತಿಸಿದೆ.