Wednesday, August 10, 2022

Latest Posts

ಮಾತೃಭಾಷೆಯ ಜನರಿಗೇ ದಯಮಾಡಿ ಕನ್ನಡ ಮಾತನಾಡಿ ಎನ್ನುವಂತಾಗಿರುವುದು ದುರಂತ: ರಾ.ನಂ.ಚಂದ್ರಶೇಖರ್

ಬೆಂಗಳೂರು ನಗರದ ಬನಶಂಕರಿ 3ನೇ ಹಂತದ ಗುರುದತ್ತ ಬಡಾವಣೆಯಲ್ಲಿ ಇತ್ತೀಚೆಗೆ ಮಂಥನ ತಂಡದಿಂದ  65ನೇ ಕನ್ನಡ ರಾಜ್ಯೋತ್ಸವ ಆಚರರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡ  ಹೋರಾಟಗಾರ ರಾ.ನಂ. ಚಂದ್ರಶೇಖರ್ ಪಾಲ್ಗೊಂಡಿದ್ದರು. ಅವರು ಮಾತನಾಡಿ, ಇಂದಿನ ದಿನಗಳಲ್ಲಿ  ಕನ್ನಡ ಮಾತೃಭಾಷೆಯಾಗಿರುವ ಜನರಿಗೂ ದಯಮಾಡಿ ಕನ್ನಡ ಮಾತನಾಡಿ ಎನ್ನುವಂತಹಾ ಪರಿಸ್ಥಿತಿ ಬಂದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

 ಹೋರಾಟದ ಹಾದಿ ನೆನಪಿಸಿಕೊಂಡರು
ನಾಡು, ಭಾಷೆಯ  ಉಳಿವಿಗಾಗಿ  ನಾವು ಬಹಳಷ್ಟು ಶ್ರಮ ವಹಿಸಿ ಹೋರಾಟ ನಡೆಸಿದ್ದೆಔಎ. ಆಗ ಕನ್ನಡ ಬರದವರಿಗೆ ಕನ್ನಡ ಕಲಿಸಿ ಎಂದೆವು, ಅಂದಿನ ಹೋರಾಟದ ಹಾದಿಯಲ್ಲಿ  ಅನಕೃ,  ಚಿ.ಮೂ, ಮಾ.ರಾಮಮೂರ್ತಿ, ಚಂಪ, ಬಸವರಾಜ ಕಟ್ಟಿಮನಿ, ಪಾಪು ಮುಂತಾದವರು ಭಾಷೆಯ ಉಳಿವಿಗಾಗಿ ವಹಿಸಿದ ಶ್ರಮ ಗಮನಾರ್ಹ ಎಂದು ಅವರು ಹೇಳಿದರು.  ಒಂದು ಭಾಷೆ ತನ್ನ ನೆಲದಲ್ಲಿಯೇ ಆ ಭಾಷೆಯ ಉಳಿವಿಗಾಗಿ ಹೋರಾಟ ನಡೆಸುವಂತಾಗುವುದು ದುರಂತ ಎಂದು ಅವರು ಈ ಸಂದರ್ಭ ಕಳವಳ ವ್ಯಕ್ತಪಡಿಸಿದರು.  ಗೋಕಾಕ್ ವರದಿಗಾಗಿ ನಟ ಡಾ. ರಾಜ್‌ಕುಮಾರ್ ಅವರು ನೀಡಿದ ಕೊಡುಗೆಯನ್ನೂ ಅವರು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ  ಸಾಹಿತಿ ಡಾ. ಎಂ.ವಿ. ನಾಗರಾಜ ರಾವ್ ಹಾಗೂ ಮಂಥನ ತಂಡದ ಸದಸ್ಯರು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಕನ್ನಡದ ಅಭಿಮಾನಿಗಳಿಗೆ ಎಂ.ಎನ್. ರಾಘವೇಂದ್ರರಾವ್ ಸ್ವಾಗತ ಕೋರಿ, ಕೃಷ್ಣಮೂರ್ತಿ ಜೋಯ್ಸ್ ವಂದಿಸಿದರು.
ರಾ.ನಂ. ಚಂದ್ರಶೇಖರ ಅವರ ಬಗ್ಗೆ…
ಕನ್ನಡದ ಹಿರಿಯ ಹೋರಾಟಗಾರ, ಸಾಹಿತಿ, ರಾ.ನಂ. ಚಂದ್ರಶೇಖರ ಅವರು ಕಳೆದ ಮೂರ್ನಾಲ್ಕು ದಶಕಗಳಿಂದ ಬರವಣಿಗೆಯ ಮೂಲಕ ಕನ್ನಡ ಭಾಷಾ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಗೆ ಕರ್ನಾಟಕ ಚೂಡಾಮಣಿ, ಕನ್ನಡ ರತ್ನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಕನ್ನಡ ಬಾವುಟದ ರೂವಾರಿ, ಹಿಮಾಲಯದಲ್ಲಿ ಕನ್ನಡ ಧ್ಯಾನ, ಕನ್ನಡದ ವೀರ ಸೇನಾನಿ ಮ. ರಾಮಮೂರ್ತಿ, ವಿಮಾನ ಯಾನ ಮುಂತಾದವು.

ಚಿತ್ರ, ಬರಹ:  ತೀರ್ಥಹಳ್ಳಿ ಅನಂತ ಕಲ್ಲಾಪುರ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss