ಮಂಗಳೂರು:ಮಂಗಳೂರು ನಗರ ಪೊಲೀಸರು ಶನಿವಾರ ಮುಂಜಾನೆ ಮಹತ್ವಪೂರ್ಣ ಕಾರ್ಯಾಚರಣೆಯಲ್ಲಿ ಮಾದಕ ಜಾಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಲ್ಲಿ ಒಬ್ಬ ಆರೋಪಿಗೆ ಚಿತ್ರರಂಗದ ನಂಟಿರುವುದು ಖಚಿತಗೊಂಡಿದೆ.
ಬಂಧಿತರಲ್ಲಿ ಒಬ್ಬ 28 ವರ್ಷದ ಅಕೀಲ್ ನೌಶೀಲ್. ಈತ ಸುರತ್ಕಲ್ ಬಳಿಯ ಕಾನ ನಿವಾಸಿ. ಹಿಂದೆ ವಿದೇಶದಲ್ಲಿ ಸೆಕ್ಯುರಿಟಿ ಆಫಿಸರ್ ಆಗಿದ್ದ. ವರ್ಷದ ಹಿಂದೆ ಸ್ವದೇಶಕ್ಕೆ ಮರಳಿದ್ದು, ನಿರ್ದಿಷ್ಟ ಉದ್ಯೋಗ ಇರಲಿಲ್ಲ.
ಮತ್ತೊಬ್ಬ ಆರೋಪಿ ಕುಳಾಯಿ ನಿವಾಸಿಯಾದ 30 ವರ್ಷದ ಕಿಶೋರ್ ಅಮನ್ ಶೆಟ್ಟಿ. ಈತನಿಗೆ ಮುಂಬಯಿ ಮತ್ತು ಬೆಂಗಳೂರಿನ ಚಿತ್ರರಂಗದ ನಂಟಿದೆ. ಕಿಶೋರ್ ಡ್ಯಾನ್ಸರ್ ಮತ್ತು ಕೊರಿಯೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ.
ಟಿವಿ ಚಾನೆಲ್ಗಳ ರಿಯಾಲಿಟಿ ಶೋಗಳಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದ. ಸಿನಿಮಾದಲ್ಲಿ ನಟಿಸಿದ್ದನು. ಇಬ್ಬರು ಜೊತೆಯಾಗಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರು. ಮಾತ್ರವಲ್ಲದೆ ಇವರು ಮಾದಕ ವ್ಯಸನಿಗಳೂ ಆಗಿದ್ದರು. ಶನಿವಾರ ಮುಂಜಾನೆ ಪೊಲೀಸರು ಕದ್ರಿ ಪದವುನಲ್ಲಿ ದಾಳಿ ನಡೆಸಿದ ವೇಳೆ ಆರೋಪಿಗಳು ಒಂದೇ ಮೋಟಾರು ಬೈಕ್ನಲ್ಲಿದ್ದರು.
ಬಂಧಿತ ಆರೋಪಗಳಿಂದ ನಿಷೇಧಿತ ಪೌಡರ್ ರೂಪದಲ್ಲಿದ್ದ ಎಂಡಿಎಂಎ ಮಾದಕ ವಸ್ತುವನ್ನು ವಶ ಪಡಿಸಿಕೊಳ್ಳಲಾಗಿದೆ. ಜೊತೆಗೆ ಮೋಟಾರು ಬೈಕ್, ಎರಡು ಮೊಬೈಲ್ ಫೋನ್ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ ರೂ.1ಲಕ್ಷವಾಗಿದೆ.
ಬಂಧಿತರ ಮೇಲೆ ಎನ್ ಡಿ ಪಿ ಎಸ್ ಕಾಯ್ದೆಯ ಅಡಿಯಲ್ಲಿ ಇಕಾನಮಿಕ್ ಆ್ಯಂಡ್ ನಾರ್ಕೋಟಿಕ್ ಕ್ರೈಮ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಸಿಬಿ ಇನ್ಸ್ಪೆಕ್ಟರ್ ಶಿವಪ್ರಕಾಶ್ ಆರ್.ನಾಯಕ್, ನಾರ್ಕೋಟಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಸಬ್ ಇನ್ಸ್ಪೆಕ್ಟರ್ ಕಬ್ಬಾಳ್ ರಾಜ್ ಮತ್ತು ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿಸಿರುವ ಪೊಲೀಸ್ ಆಯುಕ್ತರು, ಆರೋಪಿಗಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದರು.