Sunday, February 28, 2021

Latest Posts

ಮಾನಸಿಕ ಅಸ್ವಸ್ಥರಾಗಿದ್ದ ಮೀನಾ, ಸೀತಮ್ಮರ ಬಾಳಲ್ಲಿ ಬೆಳಕು ಮೂಡಿಸಿದ ‘ವಿಶ್ವಾಸದ ಮನೆ’: 10 ವರ್ಷದ ಬಳಿಕ ಮನೆಯತ್ತ ವಿಶ್ವಾಸದ ಹೆಜ್ಜೆ

ಹೊಸ ದಿಗಂತ ವರದಿ, ಶಿರ್ವ

ಮಾನಸಿಕ ಅಸ್ವಸ್ಥರಾಗಿ ಅನಾಥ ಸ್ಥಿತಿಯಲ್ಲಿದ್ದ ಉಪ್ಪಿನಂಗಡಿ ಮೂಲದ ತಾಯಿ ಮತ್ತು ಮಗ ಸಹಿತ ಇಬ್ಬರು ಮಹಿಳೆಯರು ಮತ್ತು ಒಬ್ಬ ಬಾಲಕ ಇಲ್ಲಿನ ಶಂಕರಪುರದ ಮಾನಸಿಕ ಅಸ್ವಸ್ಥರು ಮತ್ತು ನಿರ್ಗತಿಕರ ಪುನರ್ವಸತಿ ಕೇಂದ್ರ ವಿಶ್ವಾಸದ ಮನೆಯಲ್ಲಿದ್ದು, 10 ವರ್ಷಗಳ ಬಳಿಕ ತಾವು ತೊರೆದು ಬಂದ ಮನೆಯ ವಿಳಾಸ ಅರಸಿ ಹೊರಟಿದ್ದಾರೆ.

5 ತಿಂಗಳ ಗರ್ಭಿಣಿಯಾಗಿರುವಾಗಲೇ ಗಂಡ ಮನೆ ಬಿಟ್ಟು ಹೋದ ನೋವಿನಿಂದ ಮಾನಸಿಕ ಅಸ್ವಸ್ಥ ರಾಗಿ ಬೀದಿಗೆ ಬಿದ್ದಿದ್ದ ಮೀನಾ ಎಂಬ ಗರ್ಭಿಣಿ ಮಹಿಳೆಯನ್ನು ಸಾಂತ್ವನಾ ಮಹಿಳಾ ಸಹಾಯವಾಣಿ ಕೇಂದ್ರದವರು ಶಂಕರಪುರ ವಿಶ್ವಾಸದ ಮನೆಗೆ ಕರೆ ತಂದಿದ್ದರು.

ಆದರೆ ಗರ್ಭಿಣಿಯರನ್ನು ಇರಿಸಲು ಅವಕಾಶ ಇಲ್ಲದ ಕಾರಣ ಹೆರಿಗೆ ಆದ ಮೇಲೆ ಕರೆತನ್ನಿ ಎಂದು ಆಗ ಅವರನ್ನು ಹಿಂದೆ ಕಳುಹಿಸಲಾಗಿತ್ತು. 2010ರ ಫೆಬ್ರವರಿ ತಿಂಗಳಲ್ಲಿ ಹೆರಿಗೆ ಆಗಿ ನಾಲ್ಕನೇ ದಿನದಲ್ಲಿ ತಾಯಿ ಮತ್ತು ಮಗುವನ್ನು ಮತ್ತೆ ವಿಶ್ವಾಸದ ಮನೆಗೆ ತಂದು ದಾಖಲಿಸಲಾಗಿತ್ತು. ಮೊದಲೇ ಮೂರು ಮಕ್ಕಳ ತಾಯಿಯಾಗಿದ್ದ ಈಕೆ ನಾಲ್ಕನೆ ಮಗುವಿಗೆ ಜನ್ಮ ನೀಡಿದ್ದರು.

ವಿಶ್ವಾಸದ ಮನೆಯ ಆರೈಕೆ, ಪೋಷಣೆ, ಪ್ರೀತಿಯಿಂದ ಮಹಿಳೆ ನಿಧಾನಕ್ಕೆ ಸ್ವಸ್ಥರಾಗಿದ್ದು, ಮಗು ಅಭಿಷೇಕ್ ಕೂಡಾ ಇಲ್ಲೇ ಬೆಳೆದು ಸದ್ಯ 5ನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ. ಈಗ ಮಹಿಳೆ ತನ್ನ ಮನೆಯನ್ನು ನೆನೆದು ಹಿಂದಿರುಗಲು ಬಯಸಿದ್ದಾರೆ.

ಮಾನಸಿಕ ಅಸ್ವಸ್ಥೆಯಾಗಿದ್ದ ಸೀತಮ್ಮ…
ಪುತ್ತೂರು, ಮಹಿಳಾ ಸಾಂತ್ವನಾ ಕೇಂದ್ರದವರು ನಿರಾಶ್ರಿತ ಮಾನಸಿಕ ಅಸ್ವಸ್ಥ ಮಹಿಳೆ ಸೀತಮ್ಮನನ್ನು 2010ರ ಸೆಪ್ಟೆಂಬರ್ ತಿಂಗಳಲ್ಲಿ ವಿಶ್ವಾಸದ ಮನೆಗೆ ತಂದು ಬಿಟ್ಟಿ ದ್ದರು.  ಇವರು ಕೂಡಾ ಸಂಪೂರ್ಣ ಸ್ವಸ್ಥರಾಗಿದ್ದು, ಈಗ ತಮ್ಮ ಮನೆಗೆ ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಮೂವರನ್ನು ವಿಶ್ವಾಸದ ಮನೆಯ ಸಿಬಂದಿ ಶುಕ್ರವಾರ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಅವರ ಮನೆಗಳ ವಿಳಾಸ ಪತ್ತೆ ಹಚ್ಚಿ ಕುಟುಂಬದೊಂದಿಗೆ ಸೇರಿಸುವ ಭರವಸೆಯಲ್ಲಿ ಹೊರಟಿದ್ದಾರೆ. ಇವರಿಗೆ ವಿಳಾಸ ಸಿಕ್ಕರೆ ಒಳ್ಳೆಯದು ಸಿಕ್ಕದಿದ್ದರೆ ಸಾರ್ವಜನಿಕರ ಸಹಕಾರ ನಿರೀಕ್ಷಿಸಿದ್ದಾರೆ.

ಭಾವನಾತ್ಮಕ ಸನ್ನಿವೇಶ…
ತಾಯಿಯೊಂದಿಗೆ ಆಶ್ರಮ ಸೇರಿದ್ದ 4 ದಿನದ ಪುಟ್ಟ ಕಂದನಿಗೆ ಅಲ್ಲಿನ ಸಿಬಂದಿ ಅಭಿಷೇಕ್ ಎಂದು ನಾಮಕರಣ ಮಾಡಿ ಮನೆ ಮಗುವಿನಂತೆ ಸಾಕಿದ್ದರು. ತಾಯಿ ಮೀನಾ ಕೂಡಾ ಗುಣಮುಖಳಾಗಿ ಸಣ್ಣ ಪುಟ್ಟ ಕೆಲಸ ಮಾಡುತ್ತಾ ಮಲ್ಲಿಗೆ ಹೂ ಕಟ್ಟುತ್ತಾ ಮಗುವನ್ನು ಪ್ರೀತಿಯಿಂದ ಬೆಳೆಸಿದ್ದರು. ಹತ್ತು ವರ್ಷಗಳ ಬಳಿಕ ತಮ್ಮ ಮನೆ ಹುಡುಕಿ ಹೊರಟ ತಾಯಿ-ಮಗ ಇಲ್ಲಿಂದ ಹೋಗುವಾಗ  ಭಾವನಾತ್ಮಕ ಸನ್ನಿವೇಶ ಸೃಷ್ಟಿವಾಯಿತು. ಇಲ್ಲೇ ಹುಟ್ಟಿ ಬೆಳೆದ ಕಂದಮ್ಮನಿಗೆ ತನ್ನನ್ನು ನೋಡಿಕೊಂಡ ವರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಅಲ್ಲಿನ ಸಿಬಂದಿಗೂ ಮಗು ಅಗಲುವ ದುಃಖ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!