ಹುಬ್ಬಳ್ಳಿ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಗೋಪನಕೊಪ್ಪದಲ್ಲಿ ಬುಧವಾರ ತಡರಾತ್ರಿ ಯುವಕರ ನಡುವೆ ನಡೆದ ಹೊಡೆದಾಟದಲ್ಲಿ ಮಂಜುನಾಥ ಕಬ್ಬಿನ್ (30), ನಿಯಾಜ್ ಜೋರಮ್ಮನವರ (24) ಎಂಬುವವರನ್ನು ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವಿನಾಶ, ಶ್ರೀನಿವಾಸ, ಸಂದೀಪ, ಮಧು ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್, ನಿಯಾಜ್ ಗೆಳೆಯರಾಗಿದ್ದರು. ಇವರಿಬ್ಬರೂ ಹಾಗೂ ಅವಿನಾಶ ಎಂಬುವವನ ನಡುವೆ ಜಗಳವಾಗಿತ್ತು. ನಿಯಾಜ್ ಹಾಗೂ ಮಂಜುನಾಥ ಗೋಪನಕೊಪ್ಪ ಬಸ್ ನಿಲ್ದಾಣದಲ್ಲಿ ಕುಳಿತುಕೊಂಡಿದ್ದಾಗ ಅವಿನಾಶ ಹಾಗೂ ಆತನ ಸ್ನೇಹಿತರು ರಾಡ್ನಿಂದ ಹಲ್ಲೆ ನಡೆಸಿದ್ದರು. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.