ಹೊಸದಿಗಂತ ಆನ್ಲೈನ್ ಡೆಸ್ಕ್:
2021ರ ಮಾರ್ಚ್ 31ರೊಳಗೆ ಎಲ್ಲ ಖಾತೆಗಳು ಆಯಾ ಗ್ರಾಹಕರ ಆಧಾರ್ ಸಂಖ್ಯೆಗಳೊಂದಿಗೆ ಜೋಡಣೆಯಾಗಿರುವುದನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ.
ಅಲ್ಲದೇ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡದ್ದಿರುವುದರಿಂದಾಗಿಯೇ ಹಣಕಾಸು ವರ್ಗಾವಣೆಯಲ್ಲಿಯೂ ಕೆಲ ತೊಂದರೆ ಉಂಟಾಗುತ್ತಿವೆ. ಆಧಾರ್ ಜೊತೆ ಲಿಂಕ್ ಮಾಡದ ಅನೇಕ ಖಾತೆಗಳಿವೆ. ಹೀಗಾಗಿ ಮಾರ್ಚ್.31, 2021ರೊಳಗೆ ಎಲ್ಲಾ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಜೋಡಣೆಯಾಗಿದ್ಯಾ ಎಂಬುದನ್ನು ಖಾತರಿಸುವಂತೆ ಅವರು ಬ್ಯಾಂಕ್ ಗಳಿಗೆ ಸೂಚಿಸಿದ್ದಾರೆ.
ಭಾರತೀಯ ಬ್ಯಾಂಕ್ ಗಳ ಸಂಘದ 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘2021ರ ಮಾರ್ಚ್ 31ರ ವೇಳೆಗೆ, ಪ್ರತಿಯೊಂದು ಖಾತೆಯಲ್ಲೂ ಪ್ಯಾನ್ ಇರಬೇಕು. ನಿಮ್ಮ ಪ್ರತಿಯೊಂದು ಖಾತೆಯಲ್ಲೂ ಆಧಾರ್ ಇರಬೇಕು’ ಎಂದು ಭಾರತೀಯ ಬ್ಯಾಂಕ್ ಗಳ ಸಂಘದ (ಐಬಿಎ) 73ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸೀತಾರಾಮನ್ ಹೇಳಿದರು.
ಬ್ಯಾಂಕ್ಗಳು ಡಿಜಿಟಲ್ ರಹಿತ ಪಾವತಿಗಳನ್ನು ಕಡಿಮೆ ಮಾಡಬೇಕು. ಡಿಜಿಟಲ್ ಪಾವತಿ ವಹಿವಾಟಿನ ಪ್ರಚಾರ ಕ್ರಮಗಳನ್ನು ತೆಗೆದುಕೊಳ್ಳಬೇಕು. ಯುಪಿಐ ಚಾಲಿತ ಅನೇಕ ಪಾವತಿಗಳನ್ನು ಸಹ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.ಯುಪಿಐ ನಮ್ಮ ಎಲ್ಲ ಬ್ಯಾಂಕ್ಗಳಲ್ಲಿ ಸಾಮಾನ್ಯ ಸಂಭಾಷಣೆಯ ಪದವಾಗಿರಬೇಕು. ಬ್ಯಾಂಕ್ಗಳು ರುಪೇ ಕಾರ್ಡ್ಗಳನ್ನು ಉತ್ತೇಜಿಸಬೇಕು. ಯಾರಿಗೆ ಕಾರ್ಡ್ ಬೇಕಾದರೂ, ನೀವು ಉತ್ತೇಜಿಸುವ ಏಕೈಕ ಕಾರ್ಡ್ ರುಪೇ ಆಗಿರಲಿ. ದೇಶವು ದೊಡ್ಡ ಬ್ಯಾಂಕ್ಗಳಿಗೆ ಎದುರು ನೋಡುತ್ತಿದ್ದೆ ಎಂದು ಸೀತಾರಾಮನ್ ಹೇಳಿದರು.