Wednesday, July 6, 2022

Latest Posts

ಮಾರ್ಚ್ 31 ರೊಳಗೆ ಲೋಕೋಪಯೋಗಿ ಇಲಾಖೆಯ ಬಾಕಿ ಕಾಮಗಾರಿಗಳ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಡಿಸಿಎಂ ಸೂಚನೆ

ಹೊಸ ದಿಗಂತ ವರದಿ, ಬೀದರ:

ಬೀದರ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ನನೆಗುದಿಗೆ ಬಿದ್ದಿರುವ ಕಾಮಗಾರಿಗಳ 2021ರ ಮಾರ್ಚ
31ರೊಳಗೆ ಪೂರ್ಣಗೊಳಿಸಬೇಕು ಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಎಮ್. ಕಾರಜೋಳ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಹುಮನಾಬಾದ ತಾಲೂಕಿನ ತಾಲೂಕ ಪಂಚಾಯತ್ ಕಚೇರಿ ಸಂಭಾಗಣದಲ್ಲಿ ಜನವರಿ 24ರಂದು ಏರ್ಪಡಿಸಿದ್ದ ಬೀದರ ವಿಭಾಗದ ವ್ಯಾಪ್ತಿಯಲ್ಲಿ ಬರುವ ಲೋಕೋಪಯೋಗಿ ಇಲಾಖೆಯ ಎಲ್ಲಾ ಅಂಗ ಸಂಸ್ಥೆಗಳ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯ 2020-21ನೇ ಸಾಲಿನ ನಾನಾ ಯೋಜನೆಗಳಿಗೆ ನಿಗದಿಪಡಿಸಿ ಮೀಸಲಿಟ್ಟ ಎಲ್ಲ ಅನುದಾನ ಕಾಲಮಿತಿಯೊಳಗೆ ಬಳಸಲು ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ಮಾಡಿದ ಸಚಿವರು, ಅನುದಾನದ ಸಮರ್ಪಕ ಬಳಕೆಗೆ ಒತ್ತು ಕೊಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಆರ್ ಐಡಿಸಿಎಲ್ ನ ಅಧಿಕಾರಿಗಳು ಕೂಡ ಗಮನ ಕೊಡಬೇಕು ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕೂಡ ವಿಶೇಷ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕ ವಿಭಾಗದ ಬೀದರ್, ಕಲಬುರಗಿ, ರಾಯಚೂರ, ಯಾದಗಿರಿ ಮತ್ತು ಇನ್ನೀತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಕೂಡ ತುರ್ತಾಗಿ ಪೂರ್ಣಗೊಳಿಸಬೇಕು. ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಪರೀಶಿಲಿಸಿ ವರದಿ ನೀಡಬೇಕು. ಕಳಪೆ ಕಾಮಗಾರಿ ನಡೆಸುವುದು ಪರಿಶೀಲನೆ ವೇಳೆ ಕಂಡುಬಂದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಿ, ಅಂತವರಿಗೆ ಮುಂದೆ ಇನ್ನಾವುದೇ ಟೆಂಡರ್ಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಅಭಿಯಂತರರಿಗೆ ಸೂಚಿಸಿದರು.
ಈ ಸಂದರ್ಭ  ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಶಾಂತ ಜಾದವ್ ಅವರು ಮಾತನಾಡಿ, 2020ರ ಸೆಪ್ಟೆಂಬರ್ ಮತ್ತು ಅಕ್ಟೋಬರನಲ್ಲಿ ಉಂಟಾದ ಅತಿವೃಷ್ಟಿಯಿಂದಾಗಿ ಹಾಳಾದ ರಸ್ತೆ ಸೇತುವೆಗಳ ದುರಸ್ತಿಗೆ ಗಮನ ನೀಡಲಾಗಿದೆ. 10 ಕೋಟಿ ರೂ ವೆಚ್ಚದಲ್ಲಿ ಬಸವಕಲ್ಯಾಣ ಪಟ್ಟಣದ ಬಸವ ಮಹಾದ್ವಾರದಿಂದ ತ್ರಿಪುರಾಂತವರೆಗಿನ ಚತುಸ್ಪಥ ರಸ್ತೆ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಸಂಸದರಾದ ಭಗವಂತ ಖೂಬಾ, ಹುಮನಾಬಾದ ಶಾಸಕರಾದ ರಾಜಶೇಖರ ಬಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೇ, ಅರವಿಂದಕುಮಾರ ಅರಳಿ, ಚಂದ್ರಶೇಖರ ಬಿ. ಪಾಟೀಲ, ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗ್ಯಾನೇಂದ್ರಕುಮಾರ ಗಂಗವಾರ್, ಲೋಕೋಪಯೋಗಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆಆರ್ ಐಡಿ ಸಿಎಲ್ ನ ವಿಭಾಗಮಟ್ಟದ ಅಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss