ಹೊಸ ದಿಗಂತ ವರದಿ, ಕಲಬುರಗಿ:
ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಗುರುವಾರ ನಗರದ ವಿವಿಧ ಜನನಿಬಿಡ ವೃತ್ತದಲ್ಲಿ ಮಾಸ್ಕ್ ಜಾಗೃತಿ ಅಭಿಯಾನದ ಅಂಗವಾಗಿ ಮಾಸ್ಕ್ ಧರಿಸದವರಿಗೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದರು.
ನಗರದ ಜಗತ್ ವೃತ್ತ, ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತ ಹಾಗೂ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಮಾಸ್ಕ್ ಧರಿಸಿದವರಿಗೆ ದಂಡ ವಿಧಿಸಿದಲ್ಲದೆ ಉಚಿತ ಮಾಸ್ಕ್ ವಿತರಣೆ ಮಾಡುವ ಮೂಲಕ ಸಾರ್ವಜನಿಕರಲ್ಲಿ ಮಾಸ್ಕ್ ಧರಿಸುವಿಕೆ ಬಗ್ಗೆ ಜಾಗೃತಿ ಮೂಡಿಸಿದರು.
ಜಗತ್ ವೃತ್ತದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಎಸಿಪಿ ಅನ್ಶು ಕುಮಾರ ಅವರೊಂದಿಗೆ ಮಾಸ್ಕ್ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಪ್ರತಿಯೊಬ್ಬರಿಗೂ ನಯವಾಗಿ ನಮಸ್ಕರಿಸುತ್ತಾ ಕೋವಿಡ್-19 ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ಹಾಗೂ ತಮ್ಮ ಕುಟುಂಬದ ಜೊತೆಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಮನವಿ ಮಾಡಿದರು.
ಪುಟ್ಟ ಮಗುವಿಗೆ ಮಾಸ್ಕ್ ತೊಡಿಸಿದ ಡಿ.ಸಿ.: ರಾಯಚೂರು ಜಿಲ್ಲೆಯ ಸಿಂಧನೂರಿನಿಂದ ಕಲಬುರಗಿಯ ದೇವಸ್ಥಾನದ ದರ್ಶನಕ್ಕೆಂದು ಬಂದ ಕ್ರೂಸರ್ ವಾಹನದನಲ್ಲಿ ಮಾಸ್ಕ್ ಧರಿಸದೆ ಇರುವುದನ್ನು ಕಂಡು ವಾಹನ ಚಾಲಕ ಮತ್ತು ಪ್ರಯಾಣಿಕರ ತಂಡದ ಮುಖ್ಯಸ್ಥನಿಗೆ ದಂಡ ಹಾಕಲಾಯಿತು. ವಾಹನದಲ್ಲಿ ಇದ್ದ ಪುಟ್ಟ ಪೋರನಿಗೆ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ಖುದ್ದಾಗಿ ಮಾಸ್ಕ್ ಹಾಕಿ ಗಮನ ಸೆಳೆದರು.
ಇದಲ್ಲದೆ ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ಆಟೋ, ಕಾರು, ದ್ವಿಚಕ್ರ, ಪಾದಚಾರಿಗಳಿಗೆ ದಂಡ ಹಾಕಿ ಉಚಿತವಾಗಿ ಮಾಸ್ಕ್ ವಿತರಿಸಿದರು.
ಬಸ್ ನಿರ್ವಾಹಕನಿಗೂ ದಂಡ: ಸರ್ದಾರ ವಲ್ಲಭಭಾಯ ಪಟೇಲ್ ವೃತ್ತದಲ್ಲಿ ಕಲಬುರಗಿ-ಶಹಾಬಾದ ಸಂಚರಿಸುತ್ತಿದ್ದ ಸಾರಿಗೆ ಬಸ್ ಹತ್ತಿದ ಡಿ.ಸಿ. ವಿ.ವಿ.ಜ್ಯೋತ್ಸ್ನಾ ಅವರು ಪ್ರಯಾಣಿಕರಿಗೆ ಮಾಸ್ಕ್ ವಿತರಿಸಿದರು. ಮಾಸ್ಕ್ ಇಲ್ಲದೆ ಪ್ರಯಾಣಕ್ಕೆ ಅನುಮತಿ ನೀಡಿದ ಕಾರಣ ಬಸ್ ನಿರ್ವಾಹಕನಿಗೆ ದಂಡ ವಿಧಿಸಲಾಯಿತು.
ಬೀದಿ ಬದಿ ವ್ಯಾಪಾರಿಗಳಿಗೆ ಮಾಸ್ಕ್ ವಿತರಣೆ: ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಮಾಸ್ಕ್ ಜಾಗೃತಿ ಬಗ್ಗೆ ಅರಿವು ಮೂಡಿಸಿದ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಅಲ್ಲಿ ಬೀದಿ ಬದಿಯಲ್ಲಿ ತರಕಾರಿ ಮರುತ್ತಿದ್ದ ಮಹಿಳೆಯರಿಗೆ ಮಾಸ್ಕ ವಿತರಿಸಿ ಕಡ್ಡಾಯವಾಗಿ ಉಪಯೋಗಿಸುವಂತೆ ಸಲಹೆ ನೀಡಲಾಯಿತು. ಬಟ್ಟೆ, ದಿನಸಿ ಅಂಗಡಿಗಳಿಗೂ ತೆರಳಿದ ಅಧಿಕಾರಿಗಳ ತಂಡ ವ್ಯಾಪಾರಸ್ಥರು ಕಡ್ಡಾಯವಾಗಿ ಮಾಸ್ಕ್ ಧರಿಸಿ ವ್ಯಾಪಾರ ಮಾಡುವಂತೆ ಸೂಚನೆ ನೀಡಲಾಯಿತು.
12 ಸಾವಿರ ರೂ. ದಂಡ: ಗುರುವಾರದ ಕಾರ್ಯಾಚರಣೆಯಲ್ಲಿ ಸುಮಾರು 48 ಜನರಿಂದ 12000 ರೂ. ದಂಡ ವಿಧಿಸಲಾಯಿತು. ಮಾಸ್ಕ್ ಕಡ್ಡಾಯವಾದ ನಂತರ ಇದೂವರೆಗೆ ಪಾಲಿಕೆಯಿಂದ ನಗರದಲ್ಲಿ ಸುಮಾರು 4.30 ಲಕ್ಷ ರೂ. ದಂಡ ವಿಧಿಸಲಾಗಿದೆ.
ಮಹಾನಗರ ಪಲಿಕೆಯ ಆರೋಗ್ಯಾಧಿಕಾರಿ ಡಾ. ವಿನೋದ ಕುಮಾರ ಸೇರಿದಂತೆ ಪಾಲಿಕೆ ಸಿಬ್ಬಂದಿಗಳು, ಸಂಚಾರಿ ಪೊಲೀಸರು ಇದ್ದರು.