ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳಸಿರುವ ಮಿಣಿ ಮಿಣಿ ಪೌಡರ್ ಶಬ್ಧದ ಅರ್ಥ ಗೊತ್ತಿಲ್ಲದವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುತ್ತಿದ್ದು, ಅದನ್ನು ನಿಲ್ಲಿಸದಿದ್ದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟವರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇದೊಂದು ಮಿಣಿ ಮಿಣಿ ಪೌಡರ್ ಬಳಸಿ ತಯಾರಿಸಿರುವ ಹುಸಿ ಬಾಂಬ್ ಎಂದು ಹೇಳಿದ್ದರು. ಇದನ್ನೇ ದೊಡ್ಡದು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ಅವಹೇಳನ ಮಾಡುತ್ತಿರುವುದನ್ನು ಜೆಡಿಎಸ್ ಖಂಡಿಸುತ್ತದೆ ಎಂದು ಹೇಳಿದರು.
ನಾವೂ ಬಿಜೆಪಿ ಮುಖಂಡರ ಅನುಚಿತ ವರ್ತನೆಯ ಪೋಸ್ಟರ್ ಗಳನ್ನು ಬೀದಿಗಳಲ್ಲಿ ಹಾಕಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಬೇಕಾದ ಅನೇಕ ಅಭಿವೃದ್ಧಿ ಪರ ವಿಚಾರಗಳಿದ್ದರೂ ಅವನ್ನೆಲ್ಲ ಮರೆಮಾಚಲು ಅವಹೇಳನ ಕಾರಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ದೂರಿದರು. ಮಾಜಿ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಟ್ರೋಲ್ ರಾಜಕಾರಣ ಮಾಡುತ್ತಿದೆ. ಟ್ರೋಲ್ ಮಾಡುವುದರ ಹಿಂದೆ ಬಿಜೆಪಿಯ ಷಡ್ಯಂತ್ರವೇ ಇದೆ ಎಂದಿದ್ದಾರೆ.