ಹೊಸದಿಗಂತ ವರದಿ,ಉಡುಪಿ:
ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಕ್ರಾಣಿ ಶಾಂಭವಿ ನದಿಯಲ್ಲಿ ವ್ಯಕ್ತಿಯೊಬ್ಬರು ರಾತ್ರಿ ವೇಳೆ ಮೀನಿಗೆ ಹಾಕಿದ ಬಲೆ ತೆಗೆಯಲು ಹೋಗಿ ಆ ಬಲೆಯಲ್ಲಿಯೇ ಸಿಲುಕಿ ದಾರುಣವಾಗಿ ಮೃತ ಪಟ್ಟಿದ್ದಾರೆ.
ಮೃತರನ್ನು ಮುಲ್ಕಿ ನಿವಾಸಿ ವಿಜಯ್ ಫುರ್ಟಾಡೋ ಎಂದು ಗುರುತಿಸಲಾಗಿದೆ. ಅವರು ಶಾಂಭವಿ ನದಿ ತೀರದ ನೆಹರು ಸೇತುವೆ ಬಳಿ ಮೀನು ಹಿಡಿಯಲು ಬಲೆ ಹಾಕಿದ್ದರು. ಕಳೆದ ರಾತ್ರಿ 10ರ ಸುಮಾರಿಗೆ ಪರಿಶೀಲಿಸಲು ತೆರಳಿದಾಗ ಬಲೆಯೊಳಗೆ ಸಿಲುಕಿಕೊಂಡು ಮೇಲೆ ಬರಲಾಗದೆ ಮೃತಪಟ್ಟಿದ್ದಾರೆ.
ನದಿ ತೀರಕ್ಕೆ ತೆರಳಿದ ವಿಜಯ್ ಮನೆ ಕಡೆ ಬಾರದ್ದನ್ನು ಕಂಡು ತಾಯಿ ಆತಂಕಗೊಂಡು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರು ಕಾರ್ನಾಡು ಆಪತ್ಪಾಂಧವ ಆಸೀಫ್ ಅವರ ನೆರವಿನಿಂದ ರಾತ್ರೋರಾತ್ರಿ ಶವವನ್ನು ಮೇಲೆತ್ತಿದ್ದಾರೆ. ಮೃತ ವಿಜಯ್ ಅವರು ದುಬೈನ ಹೊಟೇಲಿನಲ್ಲಿ ಕೆಲಸ ಮಾಡುತ್ತಿದ್ದು, ಕೊರೋನಾ ಲಾಕ್ ಡೌನ್ ಸಮಯದಲ್ಲಿ ಊರಿಗೆ ಬಂದು ನೆಲೆಸಿ ಮೀನುಗಾರಿಕೆ ಉದ್ಯಮ ನಡೆಸುತ್ತಿದ್ದರು. ಪಡುಬಿದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.