Monday, August 15, 2022

Latest Posts

ಮುಂಗಾರು ಹಂಗಾಮು ಬಿರುಸು: ನಾಟಿ ಕಾರ್ಯ ಆರಂಭ, ಗುರಿ ಮೀರಿದ ಸಾಧನೆ ನಿರೀಕ್ಷೆ

ಉಡುಪಿ: ಪ್ರಸಕ್ತ ಮುಂಗಾರು ಹಂಗಾಮು ಈ ಬಾರಿ ಬಿರುಸು ಪಡೆದುಕೊಂಡಿದೆ. ಕೃಷಿ ಇಲಾಖೆ ಈ ಬಾರಿ ಹಾಕಿಕೊಂಡ ಗುರಿಯ ಸಮೀಪಕ್ಕೆ ತಲುಪಿದೆ. ಇನ್ನೂ ಏಳೆಂಟು ದಿನಗಳ ಕಾಲ ನಾಟಿ ಕಾರ್ಯ ನಡೆಯಲಿದ್ದು, ಗುರಿ ಮೀರಿದ ಸಾಧನೆಯ ನಿರೀಕ್ಷೆಯನ್ನೂ ಇಲಾಖೆ ಇಟ್ಟುಕೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಖಾರಿಫ್ ಬೆಳೆ ಒಟ್ಟು 36,000 ಹೆಕ್ಟೇರು ಪ್ರದೇಶದಲ್ಲಿ ಬೆಳೆಯುವ ಗುರಿ ಇರಿಸಲಾಗಿತ್ತು. ಕಳೆದ ವಾರಾಂತ್ಯದ ವೇಳೆ ಇಡೀ ಜಿಲ್ಲೆಯಲ್ಲಿ 35,756 ಹೆ. ಪ್ರದೇಶದಲ್ಲಿ ನಾಟಿ ಮತ್ತು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಈ ಬಾರಿ ಮಳೆ ಕೃಷಿಕರಿಗೆ ಉತ್ತಮವಾಗಿ ಸಹಕರಿಸಿದ್ದರಿಂದ ಒಂದೇ ಸಮನಾಗಿ ಕೃಷಿ ಚಟುವಟಿಕೆಗಳು ನಡೆದಿವೆ. ಜೊತೆಗೆ ಕೊರೋನಾ ಬಾಧೆ ಕೂಡ ಈ ವರ್ಷ ಕೃಷಿಗೆ ಪೂರಕವಾಗಿತ್ತು. ಇದರಿಂದ ಕಳೆದ ವರ್ಷಕ್ಕಿಂತ ಹೆಚ್ಚಿನ ಸಾಧನೆಯಾಗಿದೆ.
ಕಳೆದ ವರ್ಷಕ್ಕಿಂತ ಶೇ. 6.72ರಷ್ಟು ಅಧಿಕ
ಕಳೆದ ವರ್ಷ ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ ಈ ಅವಧಿಗೆ 33,335 ಹೆ. ಪ್ರದೇಶ ಬಿತ್ತನೆಯಾಗಿ ನಾಟಿಯೂ ಮುಗಿದಿತ್ತು. ಅಂದರೆ ಕಳೆದ ಸಾಲಿನಲ್ಲಿ ಶೇ. 92.59ರಷ್ಟು ಗುರಿ ಸಾಧನೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು ಶೇ. 6.72ರಷ್ಟು ಹೆಚ್ಚು ಪ್ರದೇಶದಲ್ಲಿ ಬೇಸಾಯ ಕಾರ್ಯ ನಡೆದಿದೆ. ಕಳೆದ ವರ್ಷ ಮುಂಗಾರು ಆರಂಭದಲ್ಲಿ ಮಳೆ ಕೊರತೆಯಿಂದಾಗಿ ಭತ್ತದ ಬಿತ್ತನೆ ಪ್ರದೇಶ ಕಡಿಮೆಯಾಗಿತ್ತು.
4 ತಾಲೂಕಿನಲ್ಲಿ ಗುರಿ ಮೀರಿದ ಸಾಧನೆ
ತಾಲೂಕುವಾರು ಬಿತ್ತನೆ ಪ್ರದೇಶದ ಪ್ರಗತಿಯನ್ನು ಗಮನಿಸಿದರೆ ನಾಲ್ಕು ತಾಲೂಕುಗಳಲ್ಲಿ ಗುರಿ ಮೀರಿದ ಸಾಧನೆಯಾಗಿದೆ. ಹೆಬ್ರಿ ತಾಲೂಕಿನಲ್ಲಿ 1450 ಹೆ. ಗುರಿ ಇರಿಸಿದ್ದರೆ, 1500 ಹೆ.ಗಳಲ್ಲಿ ಬಿತ್ತನೆ, ನಾಟಿ ನಡೆಡಿದೆ. ಕಾಪು ತಾಲೂಕಿನಲ್ಲಿದ್ದ 3100 ಹೆ. ಗುರಿ ಮೀರಿ 3140 ಹೆ.ಗಳಲ್ಲಿ, ಬ್ರಹ್ಮಾವರ ತಾಲೂಕಿನಲ್ಲಿರಿಸಿದ್ದ 9400 ಹೆ.ಗಿಂತ 9432 ಹೆ. ಬಿತ್ತನೆ-ನಾಟಿ ಪೂರ್ಣಗೊಂಡಿದೆ. ಬೈಂದೂರು ತಾಲೂಕಿನಲ್ಲಿ 4400 ಹೆ. ಗುರಿ ಹಾಕಿಕೊಂಡಿದ್ದು, 4410 ಹೆ. ಪ್ರದೇಶದಲ್ಲಿ ನಾಟಿ ನಡೆಸಲಾಗಿದೆ. ನಾಲ್ಕು ತಾಲೂಕುಗಳಲ್ಲಿ ಕ್ರಮವಾಗಿ ಶೇ. 103.45, 101.29, 100.34 ಮತ್ತು 100.23 ರಷ್ಟು ಗುರಿ ಸಾಧನೆ ಆಗಿದೆ.
ಉಡುಪಿ ತಾಲೂಕಿನಲ್ಲಿ 3000 ಹೆ. ಗುರಿ ಹಾಕಿಕೊಂಡಿದ್ದರೆ, ಪ್ರಸ್ತುತ ಒಂದು ಹೆ. ಪ್ರದೇಶ ಮಾತ್ರ ನಾಟಿಗೆ ಬಾಕಿ ಇದೆ. ಶೇ. 99.97ರಷ್ಟು ಗುರಿ ಸಾಧಿಸಲಾಗಿದೆ. ಕಾರ್ಕಳ ತಾಲೂಕಿನಲ್ಲಿ ಹಾಕಿಕೊಂಡಿದ್ದ 5400 ಹೆ. ಪ್ರದೇಶದಲ್ಲಿ 5350 ಹೆ. ಪ್ರದೇಶದಲ್ಲಿ ಹಾಗೂ ಕುಂದಾಪುರ ತಾಲೂಕಿನಲ್ಲಿ 9250 ಹೆ. ಗುರಿಯಲ್ಲಿ 8925 ಹೆ. ಪ್ರದೇಶದಲ್ಲಿ ನಾಟಿ ಮತ್ತು ಬಿತ್ತನೆ ನಡೆದಿದೆ. ಎರಡು ತಾಲೂಕುಗಳಲ್ಲಿ ಶೇ. 99.07 ಮತ್ತು 96.49ರಷ್ಟು ಸಾಧನೆಯಾಗಿದೆ.
ಬ್ರಹ್ಮಾವರ ತಾಲೂಕಿನಲ್ಲಿ ಅತೀ ಹೆಚ್ಚು ಪ್ರದೇಶದಲ್ಲಿ ಭತ್ತದ ಬೇಸಾಯವನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಈ ಬಾರಿ ಕೃಷಿಕರು ಅತೀ ಉತ್ಸಾಹದಿಂದ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ತಗ್ಗು ಹಾಗೂ ನದಿಪಾತ್ರದ ಭತ್ತದ ಗದ್ದೆಗಳಲ್ಲಿ ನೆರೆ ನೀರು ನಿಂತು ಕೆಲವು ಕಡೆಗಳಲ್ಲಿ ಭತ್ತದ ಸಸಿಗಳು ಕೊಳೆತಿರುವ ಬಗ್ಗೆ ರೈತರು ಹೇಳುತ್ತಿದ್ದಾರೆ. ಆದರೂ ಈ ಬಾರಿ ಇನ್ನಷ್ಟು ಪ್ರದೇಶದಲ್ಲಿ ಬೇಸಾಯ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss