Monday, August 8, 2022

Latest Posts

ಮುಂಜಾಗ್ರತೆಯೇ ಕೊರೋನಾಗೆ ಮದ್ದು: ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಜಿ.ಹೆಗಡೆ

ಚಿತ್ರದುರ್ಗ: ಕೋರೋನಾ ವೈರಸ್ ನಿವಾರಣೆಗೆ ನಿರ್ಧಿಷ್ಟ ಔಷಧಿ ಇಲ್ಲ. ಹಾಗಾಗಿ ಜನರು ರೋಗ ಬರದಂತೆ ಮುಂಜಾಗ್ರತೆ ವಹಿಸುವುದೇ ಇದಕ್ಕೆ ಸೂಕ್ತ ಪರಿಹಾರ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಎಸ್.ಜಿ.ಹಗಡೆ ಕಿವಿಮಾತು ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಾಸ್ಕ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಕೊರೋನಾ ವೈರಸ್ ಎಲ್ಲೆಡೆ ಹರಡಿದೆ. ಇದರ ಹಾವಳಿಯಿಂದ ಇಡೀ ವಿಶ್ವವೇ ಜರ್ಝರಿತವಾಗಿದೆ. ಈ ರೋಗಾ ವಾಸಿ ಮಾಡಲು ಯಾವುದೇ ಔಷಧಿ ಅಥವಾ ಲಸಿಕೆ ಇಲ್ಲ. ಹಾಗಾಗಿ ಜನರು ಎಚ್ಚರಿಕೆಯಿಂದ ಜೀವನ ನಡೆಸಬೇಕು. ರೋಗ ಬಂದಾಗ ಚಿಕಿತ್ಸೆ ಪಡೆಯುವ ಬದಲು ರೋಗ ಬರದಂತೆ ಜಾಗ್ರತೆ ವಹಿಸಬೇಕು ಎಂದರು.
ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮನೆಗಳಲ್ಲಿರಬೇಕು. ಅನಗತ್ಯವಾಗಿ ಅಲ್ಲಿ ಇಲ್ಲಿ ತಿರುಗಾಡಬಾರದು. ಮನೆಯಿಂದ ಹೊರಗೆ ಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮನೆಗೆ ಹಿಂತಿರುಗಿದ ತಕ್ಷಣ ಕೈ, ಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಲ್ಲದೇ ದಿನಂಪ್ರತಿ ಆಗಾಗ ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ಇದಕ್ಕೆ ಸೋಪು ಅಥವಾ ಸ್ಯಾನಿಟೈಜರ್ ಬಳಸಬೇಕು. ಮಾಸ್ಕ್ ಧರಿಸದಿದ್ದಲ್ಲಿ ೨೦೦ ರೂ. ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಜನರು ಆದಷ್ಟು ಗುಂಪು ಗುಂಪಾಗಿ ಸೇರದಂತೆ ನೋಡಿಕೊಳ್ಳಬೇಕು. ಜನಸಮೂಹ ಇರುವ ಪ್ರದೇಶಗಳಿಂದ ಸಾಧ್ಯವಾದಷ್ಟು ದೂರ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮುವಾಗ, ಸೀನುವಾಗ ಮೊಣಕೈ ಭಾಗವನ್ನು ಅಡ್ಡಲಾಗಿ ಬಳಸಬೇಕು. ಕೆಮ್ಮು ಅಥವಾ ಸೀನುವಾಗ ಅಂಗೈಯನ್ನು ಬಳಸಿದಲ್ಲಿ ಕೈಗಳ ಮೇಲೆ ವೈರಸ್ ಬೀಳುತ್ತವೆ. ಆ ಕೈಯಿಂದ ಯಾವುದೇ ವಸ್ತುವನ್ನು ಮುಟ್ಟಿದಾಗ ಅದು ಆ ವಸ್ತಗಳ ಮೇಲೆ ಅಂಟಿಕೊಂಡು ಇತರರಿಗೂ ಹರಡುತ್ತದೆ ಎಂದು ವಿವರಿಸಿದರು.
ಹೀಗೆ ಯಾವುದೇ ವಸ್ತುವಿನ ಮೇಲೆ ಬಿದ್ದ ವೈರಸ್ ಕನಿಷ್ಠ ಒಂದೆರಡು ದಿನಗಳ ಕಾಲ ಇರುತ್ತವೆ ಎನ್ನಲಾಗಿದೆ. ಇಂತಹ ವಸ್ತುಗಳನ್ನು ಮುಟ್ಟುವ ಮನುಷ್ಯನ ಕೈಗಳಿಗೆ ಅಂಟಿಕೊಳ್ಳುತ್ತವೆ. ಅವರು ತಮ್ಮ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿಕೊಂಡಾಗ ವೈರಸ್ ಮನುಷ್ಯನ ದೇಹವನ್ನು ಸೇರುತ್ತದೆ. ಇದರಿಂದ ರೋಗ ಹರಡಿ ಉಸಿರಾಟಕ್ಕೆ ತೊಂದರೆಯಾಗಿ ಜೀವಕ್ಕೆ ಸಂಚಕಾರ ಬರಬಹುದು. ಶೀತ, ಜ್ವರ, ಕೆಮ್ಮು, ಉಸಿರಾಟದ ತೊಂದರೆಯಂತಹ ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಆಸ್ಪತ್ರೆಗೆ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ ಎಂದು ಸಲಹೆ ಮಾಡಿದರು.
ಸೀನಿಯರ್ ಇನ್‌ಸ್ಪೆಕ್ಟರ್ ಕರುಣಾಕರ್ ಮಾತನಾಡಿ, ಕೊರೋನಾ ವೈರಸ್ ಒಂದು ಮಾರಕ ಕಾಯಿಲೆಯಾಗಿದ್ದು, ಈ ಕುರಿತು ನಿರ್ಲಕ್ಷ ಸಲ್ಲದು. ಹಾಗಾಗಿ ಪ್ರತಿಯೊಬ್ಬರೂ ಎಚ್ಚರದಿಂದ ಇರಬೇಕು. ವೈಯಕ್ತಿಕ ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳು ಸಾರ್ವಜನಿಕರ ಸ್ಥಳಗಳಲ್ಲಿ ಓಡಾಡಬಾರದು. ಕೂಡಲೇ ವೈದ್ಯರನ್ನು ಭೇಟಿ ಮಾಡಿ ಆರೋಗ್ಯ ಸಲಹೆಗಳನ್ನು ಪಡೆಯಬೇಕು ಎಂದು ಹೇಳಿದರು.
ಸೂರಿಂಟೆಂಡೆಂಟ್ ಹೇಮಂತಕುಮಾರ್ ಮಾತನಾಡಿ, ರಾಜ್ಯ ಸರ್ಕಾರವು ಕೊರೋನಾ ಹಾಳಿ ತಡೆಯುವ ನಿಟ್ಟಿನಲ್ಲಿ ಮಾಸ್ಕ್ ದಿನಾಚರಣೆ ಮಾಡುವಂತೆ ಆದೇಶ ಮಾಡಿದೆ. ಇದು ಕೇವಲ ಒಂದು ದಿನದ ಆಚರಣೆ ಅಲ್ಲ. ಪ್ರತಿದಿನವೂ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಆ ಮೂಲಕ ಕೊರೋನಾ ವೈರಸ್ ಹಾವಳಿಯನ್ನು ತಪ್ಪಿಸಬೇಕು. ಕೋರೋನಾ ಮುಕ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಸಲಹೆ ಮಾಡಿದರು.
ಸೀನಿಯರ್ ಇನ್‌ಸ್ಪೆಕ್ಟರ್‌ಗಳಾದ ಬಿ.ಬಿ.ಕೊಟಮಜ್ಜಿಗೆ, ಆರ್.ರಾಕೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss