Thursday, August 11, 2022

Latest Posts

ಮುಂಜಾಗ್ರತೆ ವಹಿಸಿ, ಲೋಪವಾಗದಂತೆ ಎಸ್ಸೆಸೆಲ್ಸಿ ಪರೀಕ್ಷೆ ನಡೆಸಿ: ಅಧಿಕಾರಿಗಳಿಗೆ ಸಚಿವ ನಾಗೇಶ್ ಸೂಚನೆ

ಕೋಲಾರ:  ಎಸ್ಸೆಸ್ಸೆಲ್ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟವಾಗಿದ್ದು, ಕೋವಿಡ್ ಸಂಕಷ್ಟದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಿ ಯಶಸ್ವಿಯಾಗಿ ಪರೀಕ್ಷೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗುರುವಾರ ಜಿಲ್ಲಾಡಳಿತ ಭವನದಲ್ಲಿ ಜೂ. ೨೫ರಿಂದ ಆರಂಭಗೊಳ್ಳುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತಯಾರಿ ಸಂಬಂಧ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರ ಪರೀಕ್ಷೆ ನಡೆಸುವ ದಿಟ್ಟ ತೀರ್ಮಾನ ತೆಗೆದುಕೊಂಡಿದೆ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಪೂರ್ವ ಸಿದ್ಧತೆ ಬಗ್ಗೆ ಚರ್ಚಿಸಿ ಪರೀಕ್ಷೆ ಯಶಸ್ವಿಗೊಳಿಸಲು ಸಚಿವ ಸಂಪುಟದಲ್ಲಿ ತೀರ್ಮಾಸಲಾಗಿದೆ ಎಂದರು.
ಆಂಧ್ರಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಸೇರಿದಂತೆ ಅನೇಕ ರಾಜ್ಯಗಳು ೧೦ನೇ ತರಗತಿ ಪರೀಕ್ಷೆ ರದ್ದುಪಡಿಸಿದೆ. ಆದರೆ ರಾಜ್ಯ ಸರ್ಕಾರ ಪರೀಕ್ಷೆ ನಡೆಸುವ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ತಿರುವಿನ ಘಟ್ಟ. ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕೆಂಬುದನ್ನು ಈ ಹಂತದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಹಾಗಾಗಿ ಕರೊನಾ ಸಂಕಷ್ಟದ ನಡುವೆಯೂ ನಡೆಸುತ್ತಿರುವ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ಇಡೀ ದೇಶಕ್ಕೆ ಮಾದರಿಯಾಗಬೇಕು. ಇದನ್ನು ಇತರೆ ರಾಜ್ಯಗಳು ಅನುಸರಿಸುವಂತಾಗಬೇಕೆಂದು ನುಡಿದರು.
ಜಿಲ್ಲೆಯ ಎಲ್ಲ ೭೦ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಗೆ ಮುನ್ನ ಹಾಗೂ ನಂತರ ಸ್ಯಾನಿಟೈಸ್ ಮಾಡಿ ಸುರಕ್ಷೆಯ ಕೇಂದ್ರವನ್ನಾಗಿ ಮಾಡಬೇಕು. ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಆಗಬೇಕು, ದೈಹಿಕ ಅಂತರ ಪಾಲನೆ ಆಗಬೇಕು, ಮಕ್ಕಳಿಗೆ ಬೆಂಚು, ಡೆಸ್ಕ್ ವ್ಯವಸ್ಥೆ ಮಾಡಿ, ನೆಲದಲ್ಲಿ ಕುಳ್ಳಿರಿಸಿ ಪರೀಕ್ಷೆ ಬರೆಸಬಾರದು.ಶಾಲೆಯಲ್ಲೇ ಬಿಸಿನೀರಿನ ವ್ಯವಸ್ಥೆಯನ್ನೂ ಮಾಡಿಕೊಳ್ಳಿ, ಯಾವುದೇ ಸಂದರ್ಭದಲ್ಲೂ ಸೇವೆಗೆ ಅಂಬ್ಯುಲೆನ್ಸ್‌ನ್ನು ಸಿದ್ದವಾಗಿಡಿ, ಮಕ್ಕಳಿಗೆ ಪ್ರಶ್ನೆಪತ್ರಿಕೆ, ಉತ್ತರ ಪತ್ರಿಕೆ ನೀಡುವವರು ಕೈಗವಸು ಧರಿಸಿರಬೇಕು ಎಂದು ಸೂಚಿಸಿದರು.
ಡಿಡಿಪಿಐ ಕೆ. ರತ್ನಯ್ಯ ಮಾತನಾಡಿ,  ಜಿಲ್ಲೆಯ ೭೦ ಪರೀಕ್ಷೆ ಕೇಂದ್ರದಲ್ಲಿ ೨೦,೯೦೬ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಕ್ಕಳ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿಟೈಸರ್, ಧರ್ಮಲ್ ಸ್ಕ್ರೀನಿಂಗ್‌ಗೆ ವ್ಯವಸ್ಥೆ,  ಮಾಡಲಾಗಿದೆ ಎಂದರು.
ಕುಡಿಯುವ ನೀರನ್ನು ಮನೆಯಿಮದಲೇ ತರಲು ಹೇಳಲಾಗಿದೆ, ಅವಶ್ಯವಿದ್ದವರಿಗೆ ಕೊಠಡಿಯಲ್ಲೇ ಪೇಪರ್ ಗ್ಲಾಸ್‌ನಲ್ಲಿ ನೀರು ಒದಗಿಸಲಾಗುವುದು. ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಸಾಕಷ್ಟು ಅಂತರ ಕಾಯ್ದುಕೊಳ್ಳಲಾಗುವುದು. ಡೆಸ್ಕ್‌ಗಳ ಕೊರತೆ ಇದ್ದ ಕಡೆ ಅಕ್ಕಪಕ್ಕದ ಶಾಲೆಗಳಿಂದ ತರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.
ಕೋಲಾರದ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಜೂನ್ ೧೫ರಂದು ನಡೆಸಿದ ಎಸ್ಸೆಸ್ಸೆಲ್ಸಿ ಅಣಕು  ಪರೀಕ್ಷೆಗೆ ಶಿಕ್ಷಣ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಎಲ್ಲ ಜಿಲ್ಲೆಗಳು ಇದೇ ಮಾದರಿಯನ್ನು ಅನುಸರಿಸಲು ಸೂಚಿಸಿದ್ದಾಗಿ ತಿಳಿಸಿದರು.
ಪರೀಕ್ಷೆ ದಿನಗಳಂದು ಅವಶ್ಯವಿರುವ ಎಲ್ಲ ಕಡೆ ಮಕ್ಕಳನ್ನು ಕರೆದುಕೊಂಡು ಬರಲು ಸಾರಿಗೆ ವ್ಯವಸ್ಥೆ ಮಾಡುವಂತೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಕರಿಗೆ ಸೂಚಿಸಿದ ಸಚಿವ ನಾಗೇಶ್,  ಆ ದಿನಗಳಲ್ಲಿ ಗ್ರಾಮೀಣ ಭಾಗಕ್ಕೆ ಸಾರಿಗೆ ಬಸ್ ಸಂಚಾರ ಇಲ್ಲದಿದ್ದರೂ ತೊಂದರೆ ಇಲ್ಲ. ಮಕ್ಕಳು ಬರುವ ಮಾರ್ಗದಲ್ಲಿ ಬಸ್ ಓಡಿಸಿ ಎಂದು ತಿಳಿಸಿದರಲ್ಲದೆ ಪರೀಕ್ಷಾ ಕೇಂದ್ರದಲ್ಲಿ ಅವ್ಯವಹಾರಕ್ಕೆ ಆಸ್ಪದ ಇಲ್ಲದಂತೆ ಸುಸೂತ್ರವಾಗಿ ಪರೀಕ್ಷೆ ನಡೆಸಿ ಎಂದು ನಿರ್ದೇಶನ ನೀಡಿದರು.
ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಮೂರು ತಿಂಗಳ ನಂತರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮನೆ ಬಿಟ್ಟು ಶಾಲೆಗೆ ಬರುತ್ತಿದ್ದಾರೆ.ಮಕ್ಕಳನ್ನು ಸೂಕ್ಷ್ಮವಾಗಿ ಪರಿಗಣಿಸಿ, ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಿ,ಶೌಚಗೃಹ ಸ್ವಚ್ಛವಾಗಿಟ್ಟುಕೊಳ್ಳಿ, ಮಕ್ಕಳಿಗೆ ೨೦,೦೦೦ ಬಟ್ಟೆ ಮಾಸ್ಕ್‌ಗಳನ್ನು ವ್ಯವಸ್ಥೆ ಮಾಡುತ್ತೇನೆ ಏನೇ ಅವಶ್ಯಕತೆ ಇದ್ದರೂ ಗಮನಕ್ಕೆ ತಂದಲ್ಲಿ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿ ಡಿಸಿ ಚಂದ್ರಶೇಖರ್ ಮಾತನಾಡಿ, ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ ಮಾರ್ಗದಲ್ಲಿ ೨೧೭ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಅದೇ ರೀತಿ ಶಿಕ್ಷಣ ಇಲಾಖೆಯೂ ಪಟ್ಟಿ ಒದಗಿಸಿದಲ್ಲಿ ಬಸ್ ವ್ಯವಸ್ಥೆ ಮಾಡಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಪಂ ಸಿಇಒ ಎಚ್.ವಿ.ದರ್ಶನ್, ಎಸ್ಪಿ ಕಾರ್ತಿಕ್ ರೆಡ್ಡಿ, ಉಪ ವಿಬಾಗಾಧಿಕಾರಿ ಸೋಮಶೇಖರ್,ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ಬಿಇಒಗಳಾದ ಕೆಎಸ್.ನಾಗರಾಜಗೌಡ, ಉಮಾದೇವಿ, ಶಿಕ್ಷಣಾಧಿಕಾರಿ ಸಿ.ಆರ್. ಅಶೋಕ್ ಸೇರಿದಂತೆ ಎಲ್ಲ ಬಿಇಒಗಳು ಇಸಿಒಗಳು ಹಾಜರಿದ್ದರು. ಶಿಕ್ಷಣ ಇಲಾಖೆಯಿಂದ ಹೊರತಂದಿರುವ ಕರೊನಾ ಜಾಗೃತಿ ಕರಪತ್ರವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss