ಹೊಸ ದಿಗಂತ ವರದಿ, ಯಾದಗಿರಿ:
ತಾಲೂಕಿನ ಮುಂಡರಗಿ ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಗದೇವಮ್ಮ ರವೀಂದ್ರ ಗುತ್ತೆದಾರ ಹಾಗೂ ಉಪಾಧ್ಯಕ್ಷರಾಗಿ ಲಲಿತಾ ಹರಿಶ್ಚಂದ್ರ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್.ಸಿ ಮಹಿಳೆಗೆ ಮೀಸಲಿತ್ತು. ಅಧ್ಯಕ್ಷ ಸ್ಥಾನಕ್ಕೆ ಜಗದೇವಮ್ಮ ರವೀಂದ್ರ ಗುತ್ತೆದಾರ ಹಾಗೂ ಶಿವಕಾಂತಮ್ಮ ಹಣಮಂತ ಪೂಜಾರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಂಗಮ್ಮ ರಮೇಶ ಹಾಗೂ ಲಲಿತಾ ಹರಿಶ್ಚಂದ್ರ ನಾಮಪತ್ರ ಸಲ್ಲಿಸಿದರು.
ಒಟ್ಟು 24 ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸಿದರು. ಜಗದೇವಮ್ಮ ರವೀಂದ್ರ ಗುತ್ತೆದಾರ 12ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಶಿವಕಾಂತಮ್ಮ ಹಣಮಂತ 11 ಮತಗಳನ್ನು ಪಡೆದರು. 1 ಮತ ತಿರಸ್ಕೃತಗೊಂಡಿತು.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಉಭಯ ಅಭ್ಯರ್ಥಿಗಳಿಗೆ ತಲಾ 12 ಮತಗಳು ಲಭಿಸಿದವು, ಚುನಾವಣಾಧಿಕಾರಿಯಾಗಿದ್ದ ಅಕ್ಷರ ದಾಸೋಹ ಅಧಿಕಾರಿ ಕನಕಪ್ಪ ಲಾಟರಿ ಮೂಲಕ ಆಯ್ಕೆಗೆ ಮುಂದಾದಾಗ ಅದೃಷ್ಟ ಲಲಿತಾ ಅವರಿಗೆ ಒಲಿಯಿತು. ಇದಕ್ಕೂ ಮೊದಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಹಿಳಾ ಸದಸ್ಯೆರೊಬ್ಬರು ಖಾಲಿ ಮತಪತ್ರ ಚಲಾವಣೆ ಮಾಡಿದರು. ಮತ ಏಣಿಕೆಯಲ್ಲಿ 1 ಮತ ತಿರಸ್ಕೃತಗೊಂಡಿರುವುದಕ್ಕೆ ಸದಸ್ಯರ 1 ಗುಂಪು ಆಕ್ಷೇಪ ವ್ಯಕ್ತಪಡಿಸಿ ಚುನಾವಣೆಯಲ್ಲಿ ಅಧಿಕಾರಿ ಅನಕ್ಷರತೆ ಮಹಿಳಾ ಸದಸ್ಯಗೆ ಚುನಾವಣಾಧಿಕಾರಿ ಸರಿಯಾದ ಮಾಹಿತಿ ನೀಡದ ಪರಿಣಾಮ ಮತದಾನದಲ್ಲಿ ಗೊಂದಲ ಮೂಡಿದೆ ಎಂದು ಆರೋಪಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಗದ್ದಲ ಉಭಯ ಬಣದ ಸದಸ್ಯರ ಮಧ್ಯೆ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಪ್ರೊಬೆಷನರಿ ಐಎಎಸ್ ಅಧಿಕಾರಿ ಅಶ್ವಜ ಹಾಗೂ ತಹಸಿಲ್ದಾರ ಚನ್ನಮಲ್ಲಪ್ಪ ಘಂಟಿ, ಪೋಲಿಸರು ಆಗಮಿಸಿ ಗುಂಪು ಸೇರಿದ ಜನರನ್ನು ಚದುರಿಸಿ ಪಂಚಾಯತನಲ್ಲಿ ಸಮಸ್ಯೆ ಚರ್ಚಿಸಿ ಈಗಾಗಲೇ ಮತದಾನ ನಡೆದಿದೆ. ಮತ ಏಣಿಕೆ ಮಾಡಿ ಆಯ್ಕೆ ಘೋಷಣೆ ಮಾಡಿ ಎಂದು ಚುನಾವಣಾಧಿಕಾರಿಗೆ ಸೂಚಿಸಿ ತೆರಳಿದರು.
ಚುನಾವಣಾಧಿಕಾರಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೋಷಿಸಿದ ನಂತರ ನೂತನ ಅಧ್ಯಕ್ಷೆ ಜಗದೇವಮ್ಮ ಮಾತ್ರ ಪಂಚಾಯತ ಒಳಗೆ ಆಗಮಿಸಿ ಇತರ ಸದಸ್ಯರಿಂದ ಅಭಿನಂದನೆಗಳನ್ನು ಸ್ವಿಕರಿಸಿದರು. ಆದರೆ ಉಪಾಧ್ಯಕ್ಷೆ ಲಲಿತಾ ಮಾತ್ರ ಪಂಚಾಯತ ಕಛೇರಿ ಪ್ರವೇಶಿಸದೇ ನನ್ನ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷ ಆಯ್ಕೆ ಲಾಟರಿ ಮೂಲಕ ಅಧಿಕಾರಿ ಮಾಡಿದ್ದಾರೆ. ನಾನು ಯಾವ ಕಾರಣಕ್ಕೂ ತೆರಳುವುದಿಲ್ಲ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ನಮ್ಮ ಬಣದ ಅಭ್ಯರ್ಥಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.